ದೇವೇಂದ್ರ ಫಡ್ನವಿಸ್ ರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಶಿವಸೇನೆ ಮುಖವಾಣಿ ‘ಸಾಮ್ನಾ’
ಮಹಾರಾಷ್ಟ್ರದಲ್ಲಿ ರಾಜಕೀಯ ಮರು ಧ್ರುವೀಕರಣ?
ಶರದ್ ಪವಾರ್ , ಉದ್ಧವ್ ಠಾಕ್ರೆ | PC : PTI
ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಮರು ಧ್ರುವೀಕರಣವಾಗಲಿದೆಯೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣವಾಗಿರುವುದು ಶಿವಸೇನೆ ಮುಖವಾಣಿ ‘ಸಾಮ್ನಾ’, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವುದು.
ಇತ್ತೀಚೆಗೆ, ಛತ್ತೀಸ್ ಗಢ ರಾಜ್ಯದ ಗಡಿಗೆ ಹೊಂದಿಕೊಂಡಂತಿರುವ ನಕ್ಸಲ್ ಪೀಡಿತ ಗಡ್ಚಿರೋಲಿ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಇದರ ಬೆನ್ನಿಗೇ, ದೇವೇಂದ್ರ ಫಡ್ನವಿಸ್ ರ ನಡೆಯನ್ನು ಶ್ಲಾಘಿಸಿರುವ ‘ಸಾಮ್ನಾ’ “ದೇವೇಂದ್ರ ಫಡ್ನವಿಸ್ ಗಡ್ಚಿರೋಲಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ನಡೆಯಿಂದ ಗಡ್ಚಿರೋಲಿಯಲ್ಲಿ ಮಾತ್ರವಲ್ಲದೆ, ಇಡೀ ಮಹಾರಾಷ್ಟ್ರದಲ್ಲಿ ಪ್ರಗತಿಯ ಹೊಸ ಯುಗಕ್ಕೆ ನಾಂದಿಯಾಗಲಿದೆ. ನಾವು ಅವರನ್ನು ಅಭಿನಂದಿಸುತ್ತೇವೆ ಹಾಗೂ ಅವರ ಈ ಉಪಕ್ರಮಗಳಿಂದ ಆದಿವಾಸಿಗಳ ಬದುಕು ಬದಲಾವಣೆಯಾಗಲಿದೆ ಎಂದು ಆಶಿಸುತ್ತೇವೆ” ಎಂದು ಲೇಖನವೊಂದರಲ್ಲಿ ಶ್ಲಾಘಿಸಿದೆ.
“ಒಂದು ವೇಳೆ ದೇವ ಭಾವು ಏನಾದರೂ ನಕ್ಸಲೀಯರ ಜಿಲ್ಲೆಯಾದ ಗಡ್ಚಿರೋಲಿಗೆ ಉಕ್ಕು ನಗರ ಎಂಬ ನೂತನ ಗುರುತು ನೀಡಲು ಬಯಸಿದರೆ, ಆಗ ಅದು ಸ್ವಾಗತಾರ್ಹವಾಗಲಿದೆ ಹಾಗೂ ಅವರು ಶ್ಲಾಘನೆಗೆ ನಿಜಕ್ಕೂ ಅರ್ಹರಾಗಲಿದ್ದಾರೆ” ಎಂದೂ ಪ್ರಶಂಸಿಸಿದೆ.
‘ಸಾಮ್ನಾ’ದಲ್ಲಿ ಪ್ರಕಟವಾಗಿರುವ ಲೇಖನವನ್ನು ಸಮರ್ಥಿಸಿರುವ ‘ಸಾಮ್ನಾ’ ಪತ್ರಿಕೆಯ ಕಾರ್ಯಕಾರಿ ಸಂಪಾದಕ ಸಂಜಯ್ ರಾವತ್, “ನಾವು ವಿರೋಧ ಪಕ್ಷದಲ್ಲಿದ್ದರೂ, ಗಡ್ಚಿರೋಲಿ ಜಿಲ್ಲೆಯ ನಿಯಂತ್ರಣವನ್ನು ಫಡ್ನವಿಸ್ ತೆಗೆದುಕೊಂಡಿರುವುದರಿಂದ ಈ ಶ್ಲಾಘನೆ ಮತ್ತು ಸ್ವಾಗತ” ಎಂದು ಸಮರ್ಥಿಸಿಕೊಂಡಿದ್ದಾರೆ. ಅವರೊಂದಿಗೆ, ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಕೂಡಾ ದೇವೇಂದ್ರ ಫಡ್ನವಿಸ್ ನಡೆಯನ್ನು ಪ್ರಶಂಸಿಸಿದ್ದು, “ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿರುವುದು ಕೇವಲ ಓರ್ವ ವ್ಯಕ್ತಿ ಮಾತ್ರ. ಉಳಿದವರು ಎಲ್ಲಿಯೂ ಕಾಣುತ್ತಲೇ ಇಲ್ಲ. ದೇವೇಂದ್ರ ಫಡ್ನವಿಸ್ ಮಾತ್ರ ಕಾರ್ಯಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ಇದು ಒಳ್ಳೆಯದಾಗಿದ್ದು, ನಾನು ಅವರಿಗೆ ಒಳಿತನ್ನು ಬಯಸುತ್ತೇನೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಈ ಹಿಂದೆ ಗಡ್ಚಿರೋಲಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಆರ್.ಆರ್.ಪಾಟೀಲ್ ಮಾತ್ರ ಜಿಲ್ಲೆಯ ಪ್ರವಾಸ ಕೈಗೊಂಡು, ಪ್ರಶಂಸಾರ್ಹ ಕೆಲಸ ಮಾಡಿದ್ದರು. ಇಂದು ದೇವೇಂದ್ರ ಫಡ್ನವಿಸ್ ಕೂಡಾ ಪಾಟೀಲರ ಪರಂಪರೆಯನ್ನು ಮುಂದುವರಿಸಿರುವುದು ಒಳ್ಳೆಯ ಭಾವನೆ ಮೂಡಿಸುತ್ತಿದೆ” ಎಂದು ಶ್ಲಾಘಿಸಿದ್ದಾರೆ.
ದೇವೇಂದ್ರ ಫಡ್ನವಿಸ್ ಕುರಿತು ‘ಸಾಮ್ನಾ’ ಹಾಗೂ ಸುಪ್ರಿಯಾ ಸುಳೆ ಪ್ರಶಂಸೆ, ಡಿಸೆಂಬರ್ 12ರಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ರ ಜನ್ಮದಿನಾಚರಣೆಯ ನೆಪದಲ್ಲಿ ಅವರ ದಿಲ್ಲಿ ನಿವಾಸಕ್ಕೆ ಭೇಟಿ ನೀಡಿದ್ದ ಅಜಿತ್ ಪವಾರ್ ಹಾಗೂ ಪವಾರ್ ಕುಟುಂಬ ಮತ್ತೆ ಒಂದಾಗಬೇಕು ಎಂದು ಕರೆ ನೀಡಿರುವ ಅಜಿತ್ ಪವಾರ್ ತಾಯಿ ಅಶ್ತಾಲ್ ರ ನಡೆಗಳು ಮಹಾರಾಷ್ಟ್ರದಲ್ಲಿ ರಾಜಕೀಯ ಮರು ಧ್ರುವೀಕರಣದ ಮುನ್ಸೂಚನೆಯನ್ನು ನೀಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.