ಶಬರಿಮಲೆ: ಪ್ರತಿ ದಿನ ಲಕ್ಷ ಭಕ್ತರನ್ನು ನಿಭಾಯಿಸಲು ಕೇರಳ ಪೊಲೀಸರು ಸಜ್ಜು
ಸಾಂದರ್ಭಿಕ ಚಿತ್ರ | PTI
ತಿರುವನಂತಪುರಂ: ಈ ವರ್ಷದ ಮಂಡಲಮ್-ಮಕರವಿಳಕ್ಕು ಯಾತ್ರೆಗಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆಯುವ ಸಂದರ್ಭದಲ್ಲಿ ಒಂದು ಲಕ್ಷದವರೆಗಿನ ಭಕ್ತರನ್ನು ನಿಭಾಯಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕೇರಳ ಪೊಲೀಸರು ಶನಿವಾರ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ ಹಾಗೂ ಅಗಾಧ ಸಂಖ್ಯೆಯ ಭಕ್ತರನ್ನು ನಿಭಾಯಿಸಲು ಪೊಲೀಸರನ್ನು ಸಜ್ಜುಗೊಳಿಸಲಾಗಿದೆ ಎಂದು ಮುಖ್ಯ ಪೊಲೀಸ್ ಸಮನ್ವಯಕಾರ ಎಡಿಜಿಪಿ ಎಸ್. ಶ್ರೀಜಿತ್ ತಿಳಿಸಿದರು. ವಾರ್ಷಿಕ ಉತ್ಸವಕ್ಕೆ ಮುನ್ನ ಶನಿವಾರ ಕೆಲವು ಗಂಟೆಗಳ ಕಾಲ ದೇವಸ್ಥಾನದ ಬಾಗಿಲು ತೆಗೆಯಲಾಗಿದೆ.
ಶನಿವಾರ ಬೆಳಗ್ಗಿನ ವೇಳೆಗೆ, 30,000ಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಎಡಿಜಿಪಿ ಶ್ರೀಜಿತ್ ತಿಳಿಸಿದರು.
41 ದಿನಗಳ ಶಬರಿಮಲೆ ಯಾತ್ರಾ ಋತು ಮಲಯಾಳಂ ತಿಂಗಳು ವೃಚ್ಚಿಕಮ್ನ ಮೊದಲ ದಿನವಾದ ಶನಿವಾರ ಆರಂಭಗೊಂಡಿದೆ.
ದೇವಸ್ಥಾನದ ಗರ್ಭಗುಡಿಯನ್ನು ಶುಕ್ರವಾರ ಸಂಜೆ 4 ಗಂಟೆಗೆ ತೆರೆಯಲಾಯಿತು.
ಆನ್ಲೈನ್ ಸರತಿ ಸಾಲು ನೊಂದಣಿ ವ್ಯವಸ್ಥೆಯ ಮೂಲಕ ಪ್ರತಿದಿನ 70,000 ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸರಕಾರ ಈಗಾಗಲೇ ತಿಳಿಸಿದೆ. ಇದಕ್ಕೆ ಹೆಚ್ಚುವರಿಯಾಗಿ, ದೇವಸ್ಥಾನದ ದಾರಿಯಲ್ಲಿ ಸ್ಥಾಪಿಸಲಾಗಿರುವ ಕೌಂಟರ್ಗಳ ಮೂಲಕ ಪ್ರತಿ ದಿನ 10,000 ಭಕ್ತರಿಗೆ ದರ್ಶನಕ್ಕೆ ಅನುಮತಿ ನೀಡಲಾಗುವುದು.