ರಾಷ್ಟ್ರ ರಾಜಧಾನಿಯಲ್ಲಿ ಕ್ಲೀನ್‍ಸ್ವೀಪ್: ಬಿಜೆಪಿ ಹ್ಯಾಟ್ರಿಕ್
ಭಾರತದ ಜನಾದೇಶ 2024
ಹೊಸದಿಲ್ಲಿ: ಸತತ ಮೂರನೇ ಬಾರಿಗೆ ರಾಷ್ಟ್ರ ರಾಜಧಾನಿಯ ಎಲ್ಲ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮತ ವಿಭಜನೆಯನ್ನು ತಡೆಯುವ ಉದ್ದೇಶದಿಂದ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಥಾನ ಹೊಂದಾಣಿಕೆ ಮಾಡಿಕೊಂಡರೂ ಬಿಜೆಪಿಯ ಓಟಕ್ಕೆ ಬ್ರೇಕ್ ಹಾಕುವಲ್ಲಿ ವಿಫಲವಾಗಿವೆ.
2019ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಮತಗಳಿಗೆ ಹೋಲಿಸಿದರೆ ಶೇಕಡ 2.4ರಷ್ಟು ಕಡಿಮೆ ಮತಗಳನ್ನು ಪಡೆದರೂ, 54.3% ಮತ ಗಳಿಸುವ ಮೂಲಕ ದಿಲ್ಲಿ ತನ್ನ ಭದ್ರಕೋಟೆ ಎನ್ನುವುದನ್ನು ಸಾಬೀತುಪಡಿಸಿದೆ. ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಒಟ್ಟು 43.2% ಮತ ಗಳಿಸಿವೆ.
ಮನೋಜ್ ತಿವಾರಿ ಅವರನ್ನು ಹೊರತುಪಡಿಸಿ ಉಳಿದೆಲ್ಲ ಹಾಲಿ ಸಂಸದರಿಗೆ ಕೊಕ್ ನೀಡಿದರೂ, ಹೊಸ ಮುಖಗಳು ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಸಫಲರಾಗಿದ್ದಾರೆ. ಕನ್ಹಯ್ಯ ಕುಮಾರ್ ಅವರನ್ನು ಮನೋಜ್ ತಿವಾರಿ 1.37 ಲಕ್ಷ ಮತಗಳಿಂದ ಪರಾಭವಗೊಳಿಸಿದ್ದು, ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದ ಬಾನ್ಸುರಿ ಸ್ವರಾಜ್, ಎಎಪಿಯ ಸೋಮನಾಥ್ ಭಾರ್ತಿ ಅವರನ್ನು 78 ಸಾವಿರ ಮತಗಳಿಂದ ಸೋಲಿಸಿದ್ದಾರೆ.
ವಾಯವ್ಯ ದೆಹಲಿಯಲ್ಲಿ ಯೋಗೇಂದ್ರ ಚಂಡೋಲಿಯಾ ಕಾಂಗ್ರೆಸ್ ಪಕ್ಷದ ಉದಿತ್ ರಾಜ್ ಅವರನ್ನು 2.9 ಲಕ್ಷ ಮತಗಳ ಭಾರೀ ಅಂತರದಿಂದ ಸೋಲಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಅತಿದೊಡ್ಡ ಅಂತರದ ಗೆಲುವು ಇದಾಗಿದೆ. ಬಿಜೆಪಿ ದಿಲ್ಲಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಜತೆಗೆ ನೆರೆಯ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿದೆ. ಉತ್ತರ ಪ್ರದೇಶದಲ್ಲಿ ಪಕ್ಷದ ಪ್ರದರ್ಶನ ನಿರಾಶಾದಾಯಕವಾಗಿದ್ದರೂ, ನೋಯ್ಡಾ ಮತ್ತು ಗಾಝಿಯಾಬಾದ್ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ನೋಯ್ಡಾದಿಂದ ಉದ್ಯಮಿ ಮಹೇಶ್ ಶರ್ಮಾ ಹ್ಯಾಟ್ರಿಕ್ ಸಾಧಿಸಿದ್ದು, 5.6 ಲಕ್ಷ ಮತಗಳ ಅಂತರದ ಇವರ ಗೆಲುವು ರಾಜ್ಯದಲ್ಲೇ ಗರಿಷ್ಠ ಅಂತರದ ಗೆಲುವು ಎನಿಸಿದೆ. ಅತುತ್ ಗಾರ್ಗ್ 3.3 ಲಕ್ಷ ಮತಗಳಿಂದ ಆಯ್ಕೆಯಾಗಿದ್ದಾರೆ. ಹರ್ಯಾಣದಲ್ಲಿ ಬಿಜೆಪಿ ಅರ್ಧದಷ್ಟು ಸ್ಥಾನಗಳನ್ನು ಕಳೆದುಕೊಂಡಿದ್ದರೂ, ಗುರುಗಾಂವ್ ಕ್ಷೇತ್ರವನ್ನು ಉಳಿಸಿಕೊಂಡಿದೆ. ಈ ಕ್ಷೇತ್ರದಿಂದ ರಾವ್ ಇಂದ್ರಜೀತ್ ಸಿಂಗ್ ಸತತ ಆರನೇ ಬಾರಿಗೆ ಗೆಲುವು ಸಧಿಸಿದು, ಫರೀದಾಬಾದ್‍ನಿಂದ ಕೃಷ್ಣನ್‍ಪಾನ್ ಗುಜ್ರಾರ್ ಹ್ಯಾಟ್ರಿಕ್ ಸಾಧಿಸಿದ್ದಾರೆ.