ಸೈಫ್ ಅಲಿ ಖಾನ್ ಮೇಲೆ ದಾಳಿ ಪ್ರಕರಣ | ಆರೋಪಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ
ಬಂಧನದ ವರದಿಗಳನ್ನು ತಳ್ಳಿ ಹಾಕಿದ ಪೋಲಿಸರು

ಸೈಫ್ ಅಲಿ ಖಾನ್ | PC : PTI
ಮುಂಬೈ: ಗುರುವಾರ ನಸುಕಿನಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸಕ್ಕೆ ನುಗ್ಗಿ ಅವರನ್ನು ಚೂರಿಯಿಂದ ಇರಿದಿದ್ದ ಆರೋಪಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಮುಂಬೈ ಪೋಲಿಸರು ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಶುಕ್ರವಾರ ಹಲವಾರು ವರದಿಗಳು ತಿಳಿಸಿವೆಯಾದರೂ ಮುಂಬೈ ಪೋಲಿಸರು ಅದನ್ನು ಅಲ್ಲಗಳೆದಿದ್ದಾರೆ.
ವ್ಯಕ್ತಿಯೋರ್ವನನ್ನು ಬಾಂದ್ರಾ ಪೋಲಿಸ್ ಠಾಣೆಗೆ ಕರೆತರುತ್ತಿರುವುದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ. ಆದರೆ ಈತ ಖಾನ್ ನಿವಾಸಕ್ಕೆ ನುಗ್ಗಿ ಅವರ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಯೇ ಎನ್ನುವುದು ಇನ್ನೂ ಖಚಿತಪಟ್ಟಿಲ್ಲ. ಆದರೆ ಈತ ಚೂರಿಯಿರಿತ ಪ್ರಕರಣಕ್ಕೆ ಸಂಬಂಧಿದ್ದಾನೆ ಎಂದು ಮೂಲಗಳು ಆರಂಭದಲ್ಲಿ ತಿಳಿಸಿದ್ದವು.
ಶುಕ್ರವಾರ ಅಪರಾಹ್ನ ಹಿರಿಯ ಪೋಲಿಸ್ ಅಧಿಕಾರಿಯೋರ್ವರು ವಿಚಾರಣೆಗಾಗಿ ಬಾಂದ್ರಾ ಠಾಣೆಗೆ ಕರೆತರಲಾಗಿರುವ ವ್ಯಕ್ತಿಗೂ ಖಾನ್ ಮೇಲೆ ದಾಳಿಗೂ ಸಂಬಂಧವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಈವರೆಗೆ ಬಂಧಿಸಿಲ್ಲ ಎಂದು ತನ್ನನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಗುರುವಾರ ನಸುಕಿನಲ್ಲಿ ಖಾನ್ ಮೇಲೆ ದಾಳಿ ನಡೆಸಿದ್ದ ವ್ಯಕ್ತಿ ಬಾಂದ್ರಾ ರೈಲು ನಿಲ್ದಾಣದ ಸಮೀಪ ಕಂಡುಬಂದಿದ್ದ. ಆತ ತನ್ನ ಬಟ್ಟೆಗಳನ್ನು ಬದಲಿಸಿದ ಬಳಿಕ ನಿಲ್ದಾಣವನ್ನು ಪ್ರವೇಶಿಸಿ ರೈಲನ್ನು ಹತ್ತಿ ತೆರಳಿದ್ದಾನೆ ಎಂದು ಪೋಲಿಸರು ನಂಬಿದ್ದಾರೆ. ಪಾಲ್ಘರ್ ಜಿಲ್ಲೆಯ ವಸಯಿ ಮತ್ತು ನಾಲಾಸೋಪರಗಳಲ್ಲಿಯೂ ಪೋಲಿಸ್ ತಂಡಗಳು ಬೀಡುಬಿಟ್ಟಿದ್ದು,ಶೋಧ ಕಾರ್ಯದಲ್ಲಿ ತೊಡಗಿವೆ.
ದಾಳಿಕೋರನ ಪತ್ತೆಗಾಗಿ 15 ಪೋಲಿಸ್ ತಂಡಗಳನ್ನು ರಚಿಸಲಾಗಿದ್ದು,ಗುರುವಾರ ಸಂಜೆಯ ವೇಳೆ ಅವುಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಲಾಗಿತ್ತು. ಪೋಲಿಸರು ತಾಂತ್ರಿಕ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ತಮ್ಮ ಬಾತ್ಮಿದಾರರ ಜಾಲವನ್ನು ಬಳಸುತ್ತಿದ್ದಾರೆ,ಆದರೆ ಘಟನೆ ನಡೆದು 36 ಗಂಟೆಗಳು ಕಳೆದಿದ್ದರೂ ಯಾವುದೇ ಮಹತ್ವದ ಸುಳಿವು ಲಭಿಸಿಲ್ಲ.
ದುಷ್ಕರ್ಮಿಯು ಕಳ್ಳತನದ ಉದ್ದೇಶದಿಂದ ಖಾನ್ ಅವರ ನಾಲ್ಕು ಅಂತಸ್ತುಗಳ ಅಪಾರ್ಟ್ಮೆಂಟ್ ಇರುವ 12 ಮಹಡಿಗಳ ‘ಸತ್ಗುರು ಶರಣ‘ ಕಟ್ಟಡವನ್ನು ಪ್ರವೇಶಿಸಿದ್ದ ಎಂದು ಹೇಳಿದ ಪೋಲಿಸರು ಆತ ಖಾನ್ ನಿವಾಸದಲ್ಲಿನ ನೌಕರರ ಪೈಕಿ ಯಾರದೋ ಪರಿಚಿತನಾಗಿದ್ದಿರಬೇಕು ಎಂದು ಶಂಕಿಸಿದ್ದು,ಇದೇ ಕಾರಣದಿಂದ ಆತ ಮೊಗಸಾಲೆಯಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಕಣ್ಣಿಗೆ ಬೀಳದೆ ಮನೆಯನ್ನು ಪ್ರವೇಶಿಸಿದ್ದ ಎಂದು ಭಾವಿಸಿದ್ದಾರೆ. ಆರೋಪಿಗೆ ಕಟ್ಟಡದ ಬಗ್ಗೆ ಚೆನ್ನಾಗಿ ತಿಳಿದಿತ್ತು ಮತ್ತು ನೆರೆಯ ಕಟ್ಟಡದ ಕಂಪೌಂಡ್ ಹತ್ತಿ ಬಂದಿದ್ದ ಆತ ಅಗ್ನಿ ಅವಘಡ ಸಂದರ್ಭದಲ್ಲಿ ಬಳಸುವ ಮೆಟ್ಟಿಲುಗಳನ್ನು ಹತ್ತಿ ಮೇಲಿನ ಅಂತಸ್ತುಗಳನ್ನು ತಲುಪಿದ್ದ ಎಂದು ಪೋಲಿಸರು ಅಂದಾಜಿಸಿದ್ದಾರೆ.
►ಚೇತರಿಸಿಕೊಳ್ಳುತ್ತಿರುವ ಖಾನ್
ಈ ನಡುವೆ ಆರು ಚೂರಿಯಿರಿತ ಗಾಯಗಳೊಂದಿಗೆ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಾನ್ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಮತ್ತು 2-3 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ ಎಂದು ನ್ಯೂರೊ ಸರ್ಜನ್ ಡಾ.ನಿತಿನ್ ಡಾಂಗೆ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಖಾನ್ ಅವರನ್ನು ಶುಕ್ರವಾರ ಐಸಿಯುನಿಂದ ಸ್ಪೆಷಲ್ ರೂಮ್ಗೆ ಸ್ಥಳಾಂತರಿಸಲಾಗಿದೆ.