ಸೈಫ್ ಅಲಿ ಖಾನ್ ಗೆ ಇರಿತ ಪ್ರಕರಣ: ಛತ್ತೀಸ್ ಗಢದಲ್ಲಿ ಶಂಕಿತನ ವಶ

ಸೈಫ್ ಅಲಿ ಖಾನ್ | PC : NDTV
ಮುಂಬೈ: ಸೈಫ್ ಅಲಿ ಖಾನ್ ಗೆ ಮುಂಬೈನ ಅವರ ನಿವಾಸದಲ್ಲಿ ಇರಿದು ಪರಾರಿಯಾಗಿದ್ದ ಶಂಕಿತ ಆರೋಪಿಯನ್ನು ಛತ್ತೀಸ್ ಗಢದಲ್ಲಿ ವಶಕ್ಕೆ ಪಡೆಯಲಾಗಿದೆ.
ಗುರುವಾರ ಮುಂಜಾನೆ ತಮ್ಮ ಐಷಾರಾಮಿ ನಿವಾಸಕ್ಕೆ ನುಗ್ಗಿದ್ದ ನುಸುಳುಕೋರನೊಂದಿಗೆ ನಡೆದಿದ್ದ ಘರ್ಷಣೆಯ ಸಂದರ್ಭದಲ್ಲಿ ಕುತ್ತಿಗೆ ಹಾಗೂ ಬೆನ್ನು ಮೂಳೆ ಸೇರಿದಂತೆ ಸೈಫ್ ಅಲಿ ಖಾನ್ ಗೆ ಹಲವು ಇರಿತದ ಗಾಯಗಳಾಗಿದ್ದವು.
ಶಂಕಿತ ಆರೋಪಿಯನ್ನು 31 ವರ್ಷದ ಆಕಾಶ್ ಕೈಲಾಶ್ ಕನೋಜಿಯ ಎಂದು ಗುರುತಿಸಲಾಗಿದ್ದು, ಆತನನ್ನು ದುರ್ಗ್ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ರೈಲ್ವೆ ರಕ್ಷಣಾ ಪಡೆಯ ಮೂಲಗಳ ಪ್ರಕಾರ, ಮುಂಬೈ ಪೊಲೀಸರು ನೀಡಿದ ಸುಳಿವಿನ ಮೇರೆಗೆ ಶಂಕಿತ ಆರೋಪಿಯನ್ನು ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸೆರೆ ಹಿಡಿಯಲಾಗಿದೆ. ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ರೈಲು ದುರ್ಗ್ ರೈಲ್ವೆ ನಿಲ್ದಾಣವನ್ನು ತಲುಪಿತು. ಶಂಕಿತ ಆರೋಪಿಯು ಸಾಮಾನ್ಯ ದರ್ಜೆಯ ಬೋಗಿಯಲ್ಲಿ ಕುಳಿತಿದ್ದ. ಆತನನ್ನು ಅದರಿಂದ ಕೆಳಗಿಳಿಸಿ, ತಕ್ಷಣವೇ ವಶಕ್ಕೆ ಪಡೆಯಲಾಯಿತು. ಆತನನ್ನು ವಿಚಾರಣೆಗೊಳಪಡಿಸಲಾಗಿದೆ” ಎಂದು ಹೇಳಲಾಗಿದೆ.
"ಮುಂಬೈ ಪೊಲೀಸರು ಶಂಕಿತ ಆರೋಪಿಯ ಫೋಟೊ, ರೈಲಿನ ಸಂಖ್ಯೆ ಹಾಗೂ ಆತನಿರುವ ಸ್ಥಳವನ್ನು ರೈಲ್ವೆ ರಕ್ಷಣಾ ಪಡೆಯ ಪೊಲೀಸರಿಗೆ ರವಾನಿಸಿದ್ದರು. ಇದಾದ ನಂತರ, ಆತನನ್ನು ಸೆರೆ ಹಿಡಿಯಲಾಗಿದೆ. ಆತ ಸದ್ಯ ರೈಲ್ವೆ ರಕ್ಷಣಾ ಪಡೆಯ ವಶದಲ್ಲಿದ್ದಾನೆ” ಎಂದೂ ಮೂಲಗಳು ಹೇಳಿವೆ.
ಶಂಕಿತ ಆರೋಪಿಯು ಮುಂಬೈ ಪೊಲೀಸರೊಂದಿಗೆ ವಿಡಿಯೊ ಕರೆ ಮೂಲಕ ಮಾತನಾಡುವಂತೆ ಮಾಡಲಾಗಿದೆ. ಮುಂಬೈ ಪೊಲೀಸ್ ತಂಡವೊಂದು ಸೆರೆ ಸಿಕ್ಕಿರುವ ವ್ಯಕ್ತಿಯು ಘಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೇ ಅಥವಾ ಬೇರಾರಾದರೂ ವ್ಯಕ್ತಿಯೇ ಎಂಬುದನ್ನು ದೃಢಪಡಿಸಿಕೊಳ್ಳಲು ದುರ್ಗ್ ನತ್ತ ತೆರಳಿದೆ.
ಆ ತಂಡವು ರಾತ್ರಿ 8 ಗಂಟೆ ವೇಳೆಗೆ ದುರ್ಗ್ ಅನ್ನು ತಲುಪಲಿದೆ ಎಂದೂ ಮೂಲಗಳು ತಿಳಿಸಿವೆ.