ಸೈಫ್ ಅಲಿ ಖಾನ್ ಇರಿತ ಪ್ರಕರಣ: ಓರ್ವ ಶಂಕಿತನನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು

Photo credit: PTI
ಮುಂಬೈ: ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿ ಖಾನ್ ಗೆ ಅವರಿಗೆ ಅವರ ನಿವಾಸದಲ್ಲೇ ಚಾಕು ಇರಿದ ಪ್ರಕರಣ ಸಂಬಂಧ ಓರ್ವ ಶಂಕಿತ ಆರೋಪಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ವ್ಯಕ್ತಿಯೊಬ್ಬನನ್ನು ಬಾಂದ್ರಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆದರೆ, ಆ ವ್ಯಕ್ತಿಯ ಬಗ್ಗೆ ಈವರೆಗೆ ಹೆಚ್ಚೇನೂ ತಿಳಿದು ಬಂದಿಲ್ಲ ಹಾಗೂ ಅದೇ ವ್ಯಕ್ತಿಯೇ ನಟ ಸೈಫ್ ಅಲಿ ಖಾನ್ ನಿವಾಸಕ್ಕೆ ನುಸುಳಿದ್ದನೇ ಎಂಬುದಿನ್ನೂ ದೃಢಪಟ್ಟಿಲ್ಲ.
ನಿನ್ನೆಯ ಘಟನೆ ನಂತರ, ಶಂಕಿತ ಆರೋಪಿಯು ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ತನಿಖೆಗಾಗಿ 20 ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಆರೋಪಿಯನ್ನು ಪತ್ತೆ ಹಚ್ಚಲು ತಾಂತ್ರಿಕ ದತ್ತಾಂಶ ಹಾಗೂ ಪೊಲೀಸ್ ಮಾಹಿತಿದಾರರನ್ನು ಬಳಸಿಕೊಳ್ಳಲಾಗಿತ್ತು.
ಸೈಫ್ ಅಲಿ ಖಾನ್ ಜೊತೆ ಹೊಡೆದಾಡುವಾಗ ಅವರಿಗೆ ಗಾಯವಾಗುವಂತೆ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸ್ ತಂಡಗಳು ವಸಾಯಿ ಹಾಗೂ ನಲಸೋಪಾರದ ಬಳಿಯೂ ಬೀಡು ಬಿಟ್ಟಿದ್ದವು. ಆರೋಪಿಯು ದರೋಡೆ ನಡೆಸಲು ಸೈಫ್ ಅಲಿ ಖಾನ್ ರ ಐಷಾರಾಮಿ ಬಂಗಲೆಯನ್ನು ಪ್ರವೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.