ಸೈಫ್ ಅಲಿ ಖಾನ್ ಗೆ ಇರಿದ ಆರೋಪಿ ಬಾಂಗ್ಲಾ ಪ್ರಜೆ: ಮುಂಬೈ ಪೊಲೀಸರು
ಆರೋಪಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

Photo credit: PTI
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಇರಿದ ಪ್ರಕರಣದ ಸಂಬಂಧ ಮುಂಬೈ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ದಾಳಿಕೋರನನ್ನು ಶರೀಫುಲ್ ಇಸ್ಲಾಂ ಶೆಹಝಾದ್ ಎಂದು ಗುರುತಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಆತ ತಾನು ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ, ಅವರ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಥಾಣೆಯ ಶುಚಿತ್ವ ಗುತ್ತಿಗೆ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ 30 ವರ್ಷದ ಶೆಹಝಾದ್ ನನ್ನು ನಗರದ ಹೀರಾನಂದಾನಿ ಎಸ್ಟೇಟ್ ಬಳಿಯಿರುವ ಮೆಟ್ರೊ ನಿರ್ಮಾಣ ಸ್ಥಳದಲ್ಲಿನ ಕಾರ್ಮಿಕರ ಶಿಬಿರದಿಂದ ಬಂಧಿಸಲಾಗಿದೆ. ಆತ ದರೋಡೆ ಮಾಡುವ ಉದ್ದೇಶದಿಂದ ಸೈಫ್ ಅಲಿ ಖಾನ್ ನಿವಾಸ ಪ್ರವೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಆರೋಪಿಯಿಂದ ವಶಪಡಿಸಿಕೊಂಡಿರುವ ದಾಖಲೆಗಳ ಪ್ರಕಾರ, ಆತ ಬಾಂಗ್ಲಾ ಪ್ರಜೆಯಾಗಿದ್ದು, ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾನೆ. ಆತ ಐದಾರು ತಿಂಗಳ ಹಿಂದೆ ಭಾರತ ಪ್ರವೇಶಿಸಿದ್ದು, ನಂತರ ಮುಂಬೈ ತಲುಪಿದ್ದಾನೆ” ಎಂದು ಹೇಳಿದ್ದಾರೆ.
ಆರೋಪಿಗೆ ಬಿಜಯ್ ದಾಸ್, ವಿಜಯ್ ದಾಸ್, ಮುಹಮ್ಮದ್ ಇಲಿಯಾಸ್ ಹಾಗೂ ಬಿಜೆಯಂತಹ ಹಲವು ಹೆಸರುಗಳಿವೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ:
ಸೈಫ್ ಅಲಿ ಖಾನ್ ಗೆ ಇರಿತ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯನ್ನು ರವಿವಾರ ಮುಂಬೈ ನ್ಯಾಯಾಲಯವೊಂದು ಜನವರಿ 24ರವರೆಗೆ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ ಆರೋಪಿಯು ಬಾಂಗ್ಲಾದೇಶದ ಪ್ರಜೆಯಾಗಿದ್ದು, ಆತನ ದಾಳಿ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಪಿತೂರಿ ಏನಾದರೂ ಇರಬಹುದೇ ಎಂಬುದನ್ನೂ ಪತ್ತೆ ಹಚ್ಚಬೇಕಿದೆ ಎಂದೂ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಪೊಲೀಸರ ಅನಿಸಿಕೆಯನ್ನು ಮನ್ನಿಸಿದ ನ್ಯಾಯಾಲಯವು, ಈ ಘಟನೆಯ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಅಡಗಿರಬಹುದು ಎಂಬ ಪ್ರಾಸಿಕ್ಯೂಷನ್ ವಾದವನ್ನು ಅಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿತು.