ಸೈಫ್ ಆಕ್ರಮಣಕಾರ ಮೇಘಾಲಯ ನದಿ ದಾಟಿ ಭಾರತಕ್ಕೆ ಬಂದಿದ್ದನು: ಪೊಲೀಸ್

ಸೈಫ್ ಅಲಿ ಖಾನ್ | PC : NDTV
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿರುವ ಆರೋಪವನ್ನು ಎದುರಿಸುತ್ತಿರುವ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಮ್ ಶೆಹಝಾದ್ ಮುಹಮ್ಮದ್ ರೊಹಿಲ್ಲಾ ಅಮೀನ್ ಫಕೀರ್ ಏಳು ತಿಂಗಳ ಹಿಂದೆ ಮೇಘಾಲಯದ ಡೌಕಿ ನದಿಯನ್ನು ದಾಟಿ ಭಾರತಕ್ಕೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತಕ್ಕೆ ಬಂದ ಬಳಿಕ, ಅವನು ಪಶ್ಚಿಮ ಬಂಗಾಳದ ನಿವಾಸಿಯೊಬ್ಬನ ಆಧಾರ್ ಕಾರ್ಡ್ ಬಳಿಕ ಸಿಮ್ ಕಾರ್ಡ್ ಖರೀದಿಸಿದ್ದಾನೆ ಎಂದು ಹೇಳಲಾಗಿದೆ.
30 ವರ್ಷದ ಆರೋಪಿಯು ಗುರುವಾರ ಮುಂಜಾನೆ ಸೈಫ್ ಅಲಿ ಖಾನ್ರ ಬಾಂದ್ರಾದಲ್ಲಿರುವ 12ನೇ ಮಹಡಿಯ ಫ್ಲ್ಯಾಟ್ಗೆ ನುಗ್ಗಿ ಅವರಿಗೆ ಚೂರಿಯಿಂದ ಹಲವು ಬಾರಿ ಇರಿದಿದ್ದನು. ಅವನನ್ನು ಪೊಲೀಸರು ರವಿವಾರ ಮುಂಜಾನೆ ಬಂಧಿಸಿದ್ದಾರೆ.
ಭಾರತಕ್ಕೆ ಬಂದ ಬಳಿಕ ಆರೋಪಿಯು ತನ್ನ ಹೆಸರನ್ನು ಬಿಜಯ್ ದಾಸ್ ಎಂಬುದಾಗಿ ಬದಲಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವನು ಬಳಸುತ್ತಿದ್ದ ಸಿಮ್ ಕಾರ್ಡ್ ಪಶ್ಚಿಮ ಬಂಗಾಳದ ಖುಕುಮೊನಿ ಜಹಾಂಗೀರ್ ಶೇಖ್ ಎಂಬ ವ್ಯಕ್ತಿಯ ಹೆಸರಿನಲ್ಲಿದೆ. ಅವನು ಸಿಮ್ ಕಾರ್ಡ್ ಖರೀದಿಸಲು ಶೇಖ್ನ ಆಧಾರ್ ಕಾರ್ಡ್ ಬಳಸಿರಬಹುದು ಎನ್ನಲಾಗಿದೆ. ಆರೋಪಿಯು ಕೆಲವು ವಾರಗಳ ಕಾಲ ಪಶ್ಚಿಮ ಬಂಗಾಳದಲ್ಲೇ ಓಡಾಡಿಕೊಂಡಿದ್ದನು. ತನ್ನ ಹೆಸರಿನಲ್ಲೇ ಆಧಾರ್ ಕಾರ್ಡ್ ಪಡೆಯಲು ಪ್ರಯತ್ನಿಸಿದ್ದನು ಎನ್ನಲಾಗಿದೆ. ಆದರೆ, ಅವನ ಪ್ರಯತ್ನ ಯಶಸ್ವಿಯಾಗಿರಲಿಲ್ಲ.
ತಾನು ಬಾಂಗ್ಲಾದೇಶದಲ್ಲಿ 12ನೇ ತರಗತಿವರೆಗೆ ಶಾಲೆಗೆ ಹೋಗಿದ್ದೇನೆ ಮತ್ತು ಕೆಲಸ ಹುಡುಕಿಕೊಂಡು ಭಾರತಕ್ಕೆ ಬಂದಿದ್ದೇನೆ ಎಂದು ಶರೀಫುಲ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೆಲವು ವಾರ ಕಳೆದ ಬಳಿಕ ಅವನು ಕೆಲಸ ಹುಡುಕಿಕೊಂಡು ಮುಂಬೈಗೆ ಬಂದಿದ್ದನು. ಅವನನ್ನು ಥಾಣೆ ಮತ್ತು ವರ್ಲಿ ಪ್ರದೇಶಗಳಲ್ಲಿರುವ ಪಬ್ಗಳು ಮತ್ತು ಹೊಟೇಲ್ಗಳಲ್ಲಿ ಹೌಸ್ಕೀಪಿಂಗ್ ಕೆಲಸಕ್ಕೆ ಕಾರ್ಮಿಕ ಗುತ್ತಿಗೆದಾರ ಅಮಿತ್ ಪಾಂಡೆ ಎಂಬವರು ಸೇರಿಸಿದ್ದರು.
ಆರಂಭದಲ್ಲಿ ತಾನು ಕೋಲ್ಕತ ನಿವಾಸಿ ಎಂಬುದಾಗಿ ಶರೀಫುಲ್ ಪೊಲೀಸರಿಗೆ ತಿಳಿಸಿದ್ದನು. ಆದರೆ, ಅವನು ಬಾಂಗ್ಲಾದೇಶದ ಫೋನ್ ಸಂಖ್ಯೆಗಳಿಗೆ ಕರೆ ಮಾಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ತನ್ನ ಕುಟುಂಬ ಸದಸ್ಯರೊಬ್ಬರಿಗೆ ಕರೆ ಮಾಡುವಂತೆ ಪೊಲೀಸರು ಅವನಿಗೆ ಸೂಚಿಸಿದರು. ಆಗ ಅವನು ತನ್ನ ಅಣ್ಣನಿಗೆ ಕರೆ ಮಾಡಿ ತನ್ನ ಶಾಲಾ ಪ್ರಮಾಣಪತ್ರ ಕಳುಹಿಸುವಂತೆ ಹೇಳಿದನು. ಅಣ್ಣನು ಅದನ್ನು ಶರೀಫುಲ್ನ ಮೊಬೈಲ್ ಫೋನ್ಗೆ ಕಳುಹಿಸಿದನು. ಇದು ಅವನು ಬಾಂಗ್ಲಾದೇಶ ಪ್ರಜೆ ಎನ್ನುವುದಕ್ಕೆ ಪ್ರಬಲ ಪುರಾವೆಯಾಗಿದೆ.
►ಕೇಂದ್ರ ಸರಕಾರದ ವೈಫಲ್ಯ: ಪ್ರಿಯಾಂಕಾ ಚತುರ್ವೇದಿ
ಸೈಫ್ ಅಲಿ ಖಾನ್ ಮೇಲೆ ಆಕ್ರಮಣ ನಡೆಸಿರುವ ಬಾಂಗ್ಲಾದೇಶ ಪ್ರಜೆಯು ಮೇಘಾಲಯದ ಮೂಲಕ ಭಾರತ ಪ್ರವೇಶಿಸಿರುವ ಬಗ್ಗೆ ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕಿ ಪ್ರಿಯಾಂಕಾ ಚತುರ್ವೇದಿ ಕಳವಳ ವ್ಯಕ್ತಪಡಿಸಿದ್ದಾರೆ. ಗಡಿಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
‘‘ಸೈಫ್ ಅಲಿ ಖಾನ್ ಮೇಲೆ ದಾಳಿದ ನಡೆಸಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗನು ಮೇಘಾಲಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾನೆ. ಇದು ಭಾರತದ ಗೃಹ ಸಚಿವ ವೈಫಲ್ಯದತ್ತ ಮತ್ತೊಮ್ಮೆ ಬೆಟ್ಟು ಮಾಡುತ್ತದೆ. ಗಡಿಗಳಲ್ಲಿ ಭದ್ರತೆಗಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ನಾಚಿಕೆಗೇಡು’’ ಎಂಬುದಾಗಿ ಪ್ರಿಯಾಂಕಾ ಚತುರ್ವೇದಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.
►5 ದಿನಗಳ ಬಳಿಕ ಸೈಫ್ ಆಸ್ಪತ್ರೆಯಿಂದ ಬಿಡುಗಡೆ
ತನ್ನ ಮನೆಯಲ್ಲಿ ಆಗಂತುಕನೊಬ್ಬನಿಂದ ಆಕ್ರಮಣಕ್ಕೆ ಒಳಗಾಗಿ ಗಾಯಗೊಂಡಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಂಗಳವಾರ ಮುಂಬೈಯ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜನವರಿ 16ರಂದು 54 ವರ್ಷದ ನಟನಿಗೆ ಆಗಂತುಕನು ಹಲವು ಬಾರಿ ಚೂರಿಯಿಂದ ಇರಿದಿದ್ದನು. ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಐದು ದಿನಗಳ ಆಸ್ಪತ್ರೆ ವಾಸದ ಬಳಿಕ ಅವರು ಮಂಗಳವಾರ ಬಿಡುಗಡೆಯಾಗಿದ್ದಾರೆ.
►ಸೈಫ್ ಮನೆಗೆ ಮತ್ತೆ ಬಂದ ಆಗಂತುಕ; ಈ ಬಾರಿ ಪೊಲೀಸರ ಜೊತೆಗೆ!
ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ ಆರೋಪವನ್ನು ಎದುರಿಸುತ್ತಿರುವ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಮ್ ಶೆಹಝಾದ್ ಮುಹಮ್ಮದ್ ರೊಹಿಲ್ಲಾ ಅಮೀನ್ ಫಕೀರ್ನನ್ನು ಮುಂಬೈ ಪೊಲೀಸರು ಮಂಗಳವಾರ ನಟನ ಬಾಂದ್ರಾ ನಿವಾಸಕ್ಕೆ ಕರೆತಂದರು.
ಗುರುವಾರ ಮುಂಜಾನೆ ನಡೆದ ಘಟನೆಯನ್ನು ಮರುರೂಪಿಸುವುದಕ್ಕಾಗಿ ಅವನನ್ನು ಪೊಲೀಸರು ಸೈಫ್ ಅಲಿ ಖಾನ್ರ ಫ್ಲ್ಯಾಟ್ಗೆ ತಂದರು. ಬಳಿಕ ಅವನನ್ನು ಇದೇ ಉದ್ದೇಶಕ್ಕಾಗಿ ಬಾಂದ್ರಾ ರೈಲು ನಿಲ್ದಾಣಕ್ಕೂ ಕರೆದುಕೊಂಡು ಹೋಗಲಾಯಿತು.
ಪೊಲೀಸರು ಸೋಮವಾರ ಸೈಫ್ ಅಲಿ ಖಾನ್ ನಿವಾಸಕ್ಕೆ ಭೇಟಿ ನೀಡಿ ಹಲವು ಬೆರಳಚ್ಚುಗಳನ್ನು ಸಂಗ್ರಹಿಸಿದರು. ಸ್ನಾನದ ಮನೆಯ ಕಿಟಿಕಿ ಸೇರಿದಂತೆ ಹಲವು ಸ್ಥಳಗಳಲ್ಲಿ ಬೆರಳಚ್ಚುಗಳು ಪತ್ತೆಯಾದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ರವಿವಾರ ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.