ಚುನಾವಣಾ ಆಯೋಗ ಪಕ್ಷಪಾತಿಯಾಗಿದೆ ಎಂದು ಆರೋಪಿಸಿದ ಸಾಕೇತ್ ಗೋಖಲೆ
ನ್ಯಾಯಯುತ ಉಪ ಚುನಾವಣೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಟಿಎಂಸಿ ನಾಯಕ
ಸಾಕೇತ್ ಗೋಖಲೆ | PC : X \ @SaketGokhale
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿನ ಮುಂಬರುವ ಉಪ ಚುನಾವಣೆಗೆ ಅಪಾಯಕಾರಿ ನಿಷ್ಕ್ರಿಯತೆ ಹಾಗೂ ಪಕ್ಷಪಾತವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಮೇಲೆ ಟಿಎಂಸಿ ಸಂಸದ ಸಾಕೇತ್ ಗೋಖಲೆ ಆರೋಪಿಸಿದ್ದಾರೆ.
ಉಪ ಚುನಾವಣೆಗಳಲ್ಲಿನ ಗಂಭೀರ ಸಮಸ್ಯೆಗಳನ್ನು ಕುರಿತು ಚುನಾವಣಾ ಆಯೋಗದ ಪೂರ್ಣ ಪೀಠವು ನವೆಂಬರ್ 8ರಂದು ಸಭೆ ನಡೆಸಿತ್ತು ಎಂದು ಅವರು ಹೇಳಿದ್ದಾರೆ. ಆದರೆ, ಈ ಕುರಿತು ನಿರಂತರವಾಗಿ ವಿಚಾರಿಸಿದರೂ, ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
ನವೆಂಬರ್ 9ರ ವೇಳೆಗೆ ತನ್ನ ಪ್ರಯತ್ನಗಳನ್ನು ಬಿರುಸುಗೊಳಿಸಿದ ಟಿಎಂಸಿ, ಲೋಕಸಭಾ ಮತ್ತು ರಾಜ್ಯಸಭೆಯಲ್ಲಿನ ಪಕ್ಷದ ಸಭಾನಾಯಕರನ್ನೊಳಗೊಂಡಂತೆ ಐದು ಮಂದಿ ಸಂಸದರ ನಿಯೋಗವನ್ನು ದಿಲ್ಲಿಗೆ ರವಾನಿಸಿತ್ತು. ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ ನಿಯೋಗವು, ತನ್ನ ಕಳವಳಗಳನ್ನು ಮಂಡಿಸಿತ್ತು. ಹೀಗಿದ್ದೂ, ಈ ಕಳವಳಗಳ ಕುರಿತು ಚುನಾವಣಾ ಆಯೋಗ ಮೌನ ವಹಿಸಿದೆ ಎಂದು ಅವರು ದೂರಿದ್ದಾರೆ.
ಟಿಎಂಸಿಯ ಕಳವಳವು ಎರಡು ಸಮಸ್ಯೆಗಳ ಸುತ್ತ ಕೇಂದ್ರೀಕರಿಸಿದೆ. ಮೊದಲನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯು ಸಿಬ್ಬಂದಿಗಳು ಸ್ಥಳೀಯ ಪೊಲೀಸರೊಂದಿಗೆ ಸಹಕರಿಸದೆ ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದು ಚುನಾವಣಾ ಆಯೋಗದ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಇದರೊಂದಿಗೆ ಸ್ಥಳೀಯ ನಿವಾಸಿಗಳ ಮನೆಗಳಿಗೆ ಭೇಟಿ ನೀಡುತ್ತಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯು ಸಿಬ್ಬಂದಿಗಳು, ಬಿಜೆಪಿಗೆ ಮತ ಚಲಾಯಿಸುವಂತೆ ಬೆದರಿಸುತ್ತಿದ್ದಾರೆ. ಎರಡನೆಯದು, ಇತ್ತೀಚೆಗೆ ಬಿಜೆಪಿ ಸಚಿವರೊಬ್ಬರು, “ನಿಮ್ಮ ಸಮವಸ್ತ್ರದಲ್ಲಿನ ರಾಷ್ಟ್ರ ಲಾಂಛನವನ್ನು ತೆಗೆದು, ಅಲ್ಲಿ ಚಪ್ಪಲಿಯನ್ನು ಹಾಕಿಕೊಳ್ಳಿ” ಎಂದು ಪಶ್ಚಿಮ ಬಂಗಾಳ ಪೊಲೀಸರನ್ನು ನಿಂದಿಸಿರುವುದು ಎಂದು ಗೋಖಲೆ ಪಟ್ಟಿ ಮಾಡಿದ್ದಾರೆ.