ಜಾಲತಾಣಗಳ ಮೂಲಕ ಬಂದೂಕು ಮಾರಾಟ: 7 ಮಂದಿ ಬಂಧನ
ಸಾಂದರ್ಭಿಕ ಚಿತ್ರ (PC: stock.adobe.com)
ಆಗ್ರಾ: ಇನ್ಸ್ಟಾಗ್ರಾಂ, ಫೇಸ್ಬುಕ್ ಮತ್ತು ವಾಟ್ಸಪ್ ಮೂಲಕ ಆನ್ಲೈನ್ ನಲ್ಲಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿದ ಪೊಲೀಸರು ಈ ಸಂಬಂಧ ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ಇಬ್ಬರು ಖರೀದಿದಾರರೂ ಸೇರಿದ್ದಾರೆ.
ಮುಝಫರ್ ನಗರದ ವ್ಯಕ್ತಿಯೊಬ್ಬರಿಗೆ ರಿವಾಲ್ವರ್ ವಿತರಣೆ ಮಾಡುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದೇಸಿ ನಿರ್ಮಿತ ಪಿಸ್ತೂಲ್ ಗಳನ್ನು 4000-5000 ರೂಪಾಯಿ ದರದಲ್ಲಿ ಅವರು ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಆಮದು ಮಾಡಿಕೊಳ್ಳಲಾದ ರಿವಾಲ್ವರ್ ಗಳನ್ನು 40 ರಿಂದ 50 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು. ಹಣ ಪಾವತಿ ಮಾಡಿದ ತಕ್ಷಣ ಅಪೇಕ್ಷಿಸಿದ ಸ್ಥಳಗಳಲ್ಲಿ ರಿವಾಲ್ವರ್ ಗಳನ್ನು ಪೂರೈಸಲಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಐದು ದೇಶಿ ನಿರ್ಮಿತ ಬಂದೂಕು, ಮೂರು ಆಮದು ಮಾಡಿಕೊಳ್ಳಲಾದ ಪಿಸ್ತೂಲು, ಎರಡು ಡಜನ್ ಗುಂಡು, ಒಂದು ಬೈಕ್ ಮತ್ತು ಕಾರನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
"ಅಕ್ರಮ ಡಿಜಿಟಲ್ ಶಸ್ತ್ರಾಸ್ತ್ರ ಮಾರಾಟ ಜಾಲವನ್ನು ಬೇಧಿಸುವಲ್ಲಿ ಇದು ಮಹತ್ವದ ಹೆಜ್ಜೆ. ಇವರು ಅಕ್ಕಪಕ್ಕದ ಗ್ಯಾಂಗ್ ಗಳ ಜತೆಗೆ ಕೂಡಾ ಸಂಪರ್ಕ ಹೊಂದಿರುವುದು ತನಿಖೆಯಿಂದ ದೃಢಪಟ್ಟಿದೆ. ಗ್ರಾಹಕರನ್ನು ಸೆಳೆಯಲು ಇವರು ಆನ್ಲೈನ್ ಪ್ಲಾಟ್ ಫಾರಂಗಳನ್ನು ಬಳಸಿಕೊಳ್ಳುತ್ತಿದ್ದರು. ಆನ್ಲೈನ್ ನಲ್ಲಿ ವ್ಯವಹಾರ ಕುದುರಿಸಿ, ಪ್ಯಾಕೇಜ್ ವಿತರಿಸುವ ಮುನ್ನ ಬ್ಯಾಂಕ್ ಖಾತೆಗೆ ಹಣ ಪಾವತಿಸಿಕೊಳ್ಳುತ್ತಿದ್ದರು" ಎಂದು ಮುಝಫರ್ ನಗರ ಎಸ್ಪಿ ಸತ್ಯನಾರಾಯಣ ಪ್ರಜಾಪತ್ ಹೇಳಿದ್ದಾರೆ.
ಈ ಬಗ್ಗೆ ಖಚಿತ ಸುಳಿವನ್ನು ಆಧರಿಸಿ ಸರ್ಕಲ್ ಇನ್ಸ್ಪೆಕ್ಟರ್ ವಿಯೋಮ್ ಬಿಂದಾಲ್ ನೇತೃತ್ವದ ತಂಡ ಆರೋಪಿಗಳ ಬಂಧನಕ್ಕೆ ಬಲೆ ಹೆಣೆಯಿತು. ಇಬ್ಬರು ಖರೀದಿದಾರರಿಗೆ ಶಸ್ತ್ರಾಸ್ತ್ರ ಒದಗಿಸಲು ಬಂದಾಗ ಅವರಿಬ್ಬರನ್ನೂ ಸೇರಿದಂತೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ವಿವರಿಸಿದ್ದಾರೆ.