ಸಲ್ಮಾನ್ ಖಾನ್ ಬೆಂಗಾವಲು ವಾಹನಗಳ ನಡುವೆ ಪ್ರವೇಶಿಸಿದ ಮೋಟಾರ್ ಸೈಕಲ್ ಸವಾರ ಪೊಲೀಸ್ ವಶಕ್ಕೆ
ಸಲ್ಮಾನ್ ಖಾನ್ | PC : NDTV
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಪೊಲೀಸ್ ಬೆಂಗಾವಲು ವಾಹನಗಳ ಮಧ್ಯೆ ಪ್ರವೇಶಿಸಿದ 21 ವರ್ಷದ ಮೋಟಾರ್ ಸೈಕಲ್ ಸವಾರನೊಬ್ಬನ ವಿರುದ್ಧ ಒರಟಾಗಿ ವಾಹನ ಚಲಾಯಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.ಸಲ್ಮಾನ್ ಖಾನ್ ಅವರು ಬುಧವಾರ ಮುಂಂಬೈನ ಮೆಹಬೂಬ್ ಸ್ಟುಡಿಯೋದಿಂದ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ಸ್ನಲ್ಲಿರುವ ತನ್ನ ನಿವಾಸಕ್ಕೆ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ.
ಬುಧವಾರ ರಾತ್ರಿ 12:15ರ ವೇಳೆಗೆ, ಮೆಹಬೂಬ್ ಸ್ಟುಡಿಯೋದ ಬಳಿ ಸಲ್ಮಾನ್ ಖಾನ್ ಅವರೊಂದಿಗಿದ್ದ ಬೆಂಗಾವಲು ವಾಹನವು ಹಾದುಹೋಗುತ್ತಿದ್ದಾಗ ಉಝೈರ್ ಫೈಝ್ ಮೊಹಿಯುದ್ದೀನ್ (21) ಎಂಬಾತ ಸಲ್ಮಾನ್ ಖಾನ್ ಅವರಿದ್ದ ವಾಹನದ ಸಮೀಪಕ್ಕೆ ಬರಲು ಯತ್ನಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿ ಆತನಿಗೆ ಎಚ್ಚರಿಕೆ ನೀಡಲು ಯತ್ನಿಸಿದರೂ, ಅದನ್ನು ಲೆಕ್ಕಿಸದೆ ಆತ ಸಲ್ಮಾನ್ ಖಾನ್ರ ವಾಹನವನ್ನು ಸಮೀಪಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಸಲ್ಮಾನ್ ಅವರು ತನ್ನ ನಿವಾಸವನ್ನು ತಲುಪುತ್ತಿದ್ದಂತೆಯೇ, ಎರಡು ಪೊಲೀಸ್ ವಾಹನಗಳು ಮೋಟಾರ್ಸೈಕಲ್ ಸವಾರನನ್ನು ಬೆನ್ನಟ್ಟಿ, ಆತನನ್ನು ಅಡ್ಡಗಟ್ಟಿದವು. ಆನಂತರ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು.
ತಾನೋರ್ವ ಕಾಲೇಜು ವಿದ್ಯಾರ್ಥಿಯೆಂದು ಮೊಹಿಯುದ್ದೀನ್ ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಉಝೈರ್ ಫೈಝ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳಾದ 125 (ಒರಟಾಗಿ ಹಾಗೂ ನಿರ್ಲಕ್ಷ್ಯದ ಕೃತ್ಯದಿಂದ ಇತರರ ಪ್ರಾಣರ್ರೆ ಅಪಾಯವುಂಟು ಮಾಡುವುದ) ಹಾಗೂ 281 (ಒರಟಾಗಿ ಹಾಗೂ ನಿರ್ಲಕ್ಷ್ಯದ ವಾಹನ ಚಾಲನೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆತನನ್ನು ಬಂಧಿಸಿಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನಟ ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಜೀವ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಅವರಿಗೆ ‘ವೈ ಪ್ಲಸ್’ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ.