ನಟ ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ : 2 ಕೋಟಿ ರೂ.ಗೆ ಬೇಡಿಕೆ
Photo | NDTV
ಹೊಸದಿಲ್ಲಿ : ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೊಂದು ಕೊಲೆ ಬೆದರಿಕೆ ಹಾಕಲಾಗಿದ್ದು, ಅಪರಿಚಿತ ಕರೆ ಮೂಲಕ 2 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ ಎಂದು ವರದಿಯಾಗಿದೆ.
ಮುಂಬೈ ಪೊಲೀಸರ ಟ್ರಾಫಿಕ್ ಹೆಲ್ಪ್ ಲೈನ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದ್ದು, ವರ್ಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ಸಲ್ಮಾನ್ ಖಾನ್ 2 ಕೋಟಿ ರೂ. ಹಣ ನೀಡದಿದ್ದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಟ್ರಾಫಿಕ್ ಪೊಲೀಸರು ವರ್ಲಿ ಪೊಲೀಸರಿಗೆ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬಳಿಕ ಬೆದರಿಕೆಯ ಮೂಲಗಳನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಸಲ್ಮಾನ್ ಖಾನ್ ಮತ್ತು ಎನ್ ಸಿ ಪಿ ನಾಯಕ ಜೀಶನ್ ಸಿದ್ದೀಕಿಗೆ ಜೀವ ಬೆದರಿಕೆ ಹಾಕಿದ್ದಕ್ಕಾಗಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಆರೋಪಿಯನ್ನು ಮುಂಬೈ ಪೊಲೀಸ್ ಬಂಧಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಸಲ್ಮಾನ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಈ ಹಿಂದೆ ಕೊಲೆ ಬೆದರಿಕೆಗಳು ಬಂದಿದ್ದವು. ಸರಣಿ ಬೆದರಿಕೆ ಹಿನ್ನೆಲೆ ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಲಾಗಿತ್ತು.