ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯದ ಕ್ಷಮೆಯಾಚಿಸಬೇಕು: ರಾಕೇಶ್ ಟಿಕಾಯತ್ ಆಗ್ರಹ
ರಾಕೇಶ್ ಟಿಕಾಯತ್ (Photo: PTI)
ಪ್ರಯಾಗರಾಜ್: ಬಿಷ್ಣೋಯ್ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯದ ಕ್ಷಮೆಯಾಚಿಸಬೇಕೆಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.
ಪ್ರಯಾಗ್ರಾಜ್ ನಲ್ಲಿ ನಡೆದ ಕಿಸಾನ್ ಸಮ್ಮೇಳನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್, ಪರಿಸರ ಮತ್ತು ಪ್ರಾಣಿಗಳ ಸಂರಕ್ಷಣೆ ಕುರಿತು ಸಮರ್ಪಣೆಗೆ ಹೆಸರುವಾಸಿಯಾದ ಬಿಷ್ಣೋಯಿ ಸಮುದಾಯದ ಭಾವನೆಗಳನ್ನು ಗೌರವಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಬಿಷ್ಣೋಯಿ ಸಮುದಾಯ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಪ್ರಯತ್ನ ಮಾಡಿದೆ. ಸಲ್ಮಾನ್ ಖಾನ್ ಅವರ ಯಾವುದೇ ನಡವಳಿಕೆಯಿಂದ ಅವರ ಭಾವನೆಗಳು ಘಾಸಿಗೊಂಡಿದ್ದರೆ, ಅವರು ಕ್ಷಮೆಯಾಚಿಸಬೇಕು. ಕ್ಷಮೆಯಾಚಿಸುವುದರಿಂದ ಹಾನಿಯನ್ನು ತಡೆಯಬಹುದು ಮತ್ತು ವಿವಾದಕ್ಕೆ ಅಂತ್ಯವಾಡಲು ಕೂಡ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯದ ಕ್ಷಮೆಯಾಚಿಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಲಾರೆನ್ಸ್ ಬಿಷ್ಣೋಯ್ ಇತ್ತೀಚೆಗೆ ಬೆದರಿಕೆ ಹಾಕಿದ ಹಿನ್ನೆಲೆ ರಾಕೇಶ್ ಟಿಕಾಯತ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅವರು ಶಿಕ್ಷೆಯನ್ನು ಕೂಡ ಅನುಭವಿಸಿದ್ದಾರೆ. ಕೃಷ್ಣಮೃಗವನ್ನು ಬಿಷ್ಣೋಯಿ ಸಮುದಾಯ ಪವಿತ್ರವೆಂದು ಪರಿಗಣಿಸಿದೆ.