ಭಾರತಕ್ಕೆ ಚೀನಾದಿಂದ ಬೆದರಿಕೆಯಿದೆ ಎಂಬ ಆರೋಪ ನನಗೆ ಅರ್ಥವಾಗುತ್ತಿಲ್ಲ: ವಿವಾದ ಸೃಷ್ಟಿಸಿದ ಸ್ಯಾಮ್ ಪಿತ್ರೋಡಾ ಹೇಳಿಕೆ

ಸ್ಯಾಮ್ ಪಿತ್ರೋಡಾ | PTI
ಹೊಸದಿಲ್ಲಿ: ಭಾರತ ಚೀನಾದಿಂದ ಬೆದರಿಕೆ ಎದುರಿಸುತ್ತಿದೆ ಎನ್ನುವುದು ತನಗೆ ಅರ್ಥವಾಗುತ್ತಿಲ್ಲ ಎಂದು ಹೇಳುವ ಮೂಲಕ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಪಿತ್ರೋಡಾ, ‘ಚೀನಾದಿಂದ ಬೆದರಿಕೆ ನನಗೆ ಅರ್ಥವಾಗುತ್ತಿಲ್ಲ. ಭಾರತ-ಚೀನಾ ನಡುವಿನ ಗಡಿ ವಿವಾದವನ್ನು ಹೆಚ್ಚಾಗಿ ಉತ್ಪ್ರೇಕ್ಷಿಸಲಾಗುತ್ತಿದೆ. ಇದು ಅಮೆರಿಕವು ತನ್ನ ಶತ್ರುವನ್ನು ವ್ಯಾಖ್ಯಾನಿಸುವ ಪ್ರವೃತ್ತಿಯ ಅನುಸರಣೆಯಾಗಿದೆ ಎಂದು ನಾನು ಭಾವಿಸಿದ್ದೇನೆ. ಎಲ್ಲ ದೇಶಗಳು ಒಗ್ಗಟ್ಟಾಗಿ ಮುಂದುವರಿಯಬೇಕು ಮತ್ತು ಪರಸ್ಪರ ಕಾದಾಡಬಾರದು. ಅದಕ್ಕೆ ಇದು ಸಕಾಲವಾಗಿದೆ’ ಎಂದು ಹೇಳಿದರು.
ಪಿತ್ರೋಡಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ,ಅವರ ಹೇಳಿಕೆಗಳು ಚೀನಾವನ್ನು ಬೆಂಬಲಿಸುವ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಅನುಗುಣವಾಗಿವೆ ಎಂದು ಹೇಳಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿಯವರು, ಪಿತ್ರೋಡಾ ಹೇಳಿಕೆಯು ಕಾಂಗ್ರೆಸ್ ಪಕ್ಷದ ಮನಃಸ್ಥಿತಿಯನ್ನು ಸೂಚಿಸುತ್ತದೆ. ಅವರು ಚೀನಾದ ಆಡಳಿತ ಪಕ್ಷದೊಂದಿಗೆ ಕಾಂಗ್ರೆಸ್ನ ಹೊಂದಾಣಿಕೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಪಿತ್ರೋಡಾರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ವಕ್ತಾರ ತುಹಿನ್ ಸಿನ್ಹಾ ಅವರು, ಭಾರತದ 40,000 ಚ.ಕಿ.ಮೀ.ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟು ಕೊಟ್ಟವರಿಗೆ ಈಗಲೂ ಅದರಿಂದ ಯಾವುದೇ ಬೆದರಿಕೆ ಕಾಣುತ್ತಿಲ್ಲ. ಚೀನಾದ ಮೇಲೆ ಕಾಂಗ್ರೆಸಿನ ಅತಿಯಾದ ಮೋಹದ ತಿರುಳು 2008ರ ನಿಗೂಢ ಕಾಂಗ್ರೆಸ್-ಚೈನೀಸ್ ಕಮ್ಯುನಿಸ್ಟ್ ಪಾರ್ಟಿ ಒಪ್ಪಂದದಲ್ಲಿ ಅಡಗಿದೆ ಎಂದು ಹೇಳಿದ್ದಾರೆ.
ಗಮನಾರ್ಹವಾಗಿ 2008ರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬೀಜಿಂಗ್ ಒಲಿಪಿಂಕ್ಸ್ಗೆ ತೆರಳಿದ್ದಾಗ ರಾಹುಲ್ ಮತ್ತು ಆಗ ಚೀನಾದ ಉಪಾಧ್ಯಕ್ಷರಾಗಿದ್ದ ಕ್ಸಿ ಜಿನ್ಪಿಂಗ್ ಅವರು ದ್ವಿಪಕ್ಷೀಯ,ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಅಭಿವೃದ್ಧಿ ವಿಷಯಗಳ ಕುರಿತು ಉಭಯ ಪಕ್ಷಗಳು ಪರಸ್ಪರ ಸಮಾಲೋಚನೆ ನಡೆಸಲು ನೆರವಾಗುವ ಕಾರ್ಯ ವಿಧಾನವನ್ನು ರೂಪಿಸಲು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು.
► ಅಂತರ ಕಾಯ್ದುಕೊಂಡ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವು ಪಿತ್ರೋಡಾ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಂಡಿದೆ. ಪಿತ್ರೋಡಾ ಹೇಳಿಕೆಯು ಅವರ ಸ್ವಂತ ಅಭಿಪ್ರಾಯವಾಗಿದೆ. ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾಯದರ್ಶಿ ಜೈರಾಮ ರಮೇಶ ಸ್ಪಷ್ಟಪಡಿಸಿದ್ದಾರೆ.
ಪಿತ್ರೋಡಾರ ಅಭಿಪ್ರಾಯಗಳು,ವಿಶೇಷವಾಗಿ ಭಾರತದ ವಿದೇಶಾಂಗ ನೀತಿ ಮತ್ತು ಭದ್ರತಾ ಸವಾಲುಗಳಲ್ಲಿ ಚೀನಾದ ಪಾತ್ರದ ಕುರಿತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ರಮೇಶ ಎಕ್ಸ್ ಪೋಸ್ಟ್ನಲ್ಲಿ ಒತ್ತಿ ಹೇಳಿದ್ದಾರೆ.