ಸಂಭಾಲ್ ಹಿಂಸಾಚಾರ: ಸಮಾಜವಾದಿ ಪಕ್ಷದ ಸಂಸದ, ಶಾಸಕನ ಪುತ್ರ ಸೇರಿ 400 ಮಂದಿ ವಿರುದ್ಧ ಪ್ರಕರಣ ದಾಖಲು
Photo credit: PTI
ಉತ್ತರಪ್ರದೇಶ: ಸಂಭಾಲ್ ನ ಶಾಹಿ ಜಾಮಾ ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಭಾಲ್ ಸಂಸದ ಹಾಗೂ ಸಮಾಜವಾದಿ ಪಕ್ಷದ ನಾಯಕ ಝಿಯಾ ಉರ್ ರಹಮಾನ್ ಬರ್ಕ್, ಸಮಾಜವಾದಿ ಪಕ್ಷದ ಸ್ಥಳೀಯ ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ಸೊಹೈಲ್ ಇಕ್ಬಾಲ್ ಸೇರಿದಂತೆ 400 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಝಿಯಾ ಉರ್ ರಹಮಾನ್ ಬರ್ಕ್ ಮತ್ತು ಸೊಹೈಲ್ ಇಕ್ಬಾಲ್ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ, ಗುಂಪನ್ನು ಸೇರಿಸಿದ ಹಾಗೂ ಅಶಾಂತಿಗೆ ಪ್ರಚೋದನೆ ನೀಡಿದ ಆರೋಪಗಳನ್ನು ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ಸಂಭಾಲ್ ನಲ್ಲಿನ ಮೊಘಲರ ಕಾಲದ ಶಾಹಿ ಮಸೀದಿ ಸಮೀಕ್ಷೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಏರ್ಪಟ್ಟು ನಾಲ್ಕು ಮಂದಿ ಮೃತಪಟ್ಟಿದ್ದರು.
ಘರ್ಷಣೆಯ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರೇ ಗುಂಡು ಹಾರಿಸಿದ್ದು, ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಕಾಲಿಗೆ ಗಾಯವಾಗಿದ್ದು, ಮತ್ತೊಬ್ಬ ಪೊಲೀಸ್ ಅಧಿಕಾರಿಗೆ ಗುಂಡಿನ ಚೂರು ತಗುಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂಸಾಚಾರದಲ್ಲಿ ಸುಮಾರು 15-20 ಭದ್ರತಾ ಸಿಬ್ಬಂದಿಗಳಿಗೆ ಗಾಯಗಳಾಗಿದ್ದು, ಓರ್ವ ಪೊಲೀಸ್ ಸಿಬ್ಬಂದಿಯ ತಲೆಗೆ ಗಂಭೀರ ಗಾಯವಾಗಿದೆ. ಅಲ್ಲದೆ ಉಪ ವಿಭಾಗಾಧಿಕಾರಿಯ ಕಾಲಿನ ಮೂಳೆ ಮುರಿದಿದೆ.
ಸ್ಥಳದಲ್ಲಿ ಇಂದೂ ಕೂಡಾ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರಿದಿದ್ದು, ಸಂಭಾಲ್ ನಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಮೊಬೈಲ್ ಅಂತರ್ಜಾಲ ಸೇವೆಯನ್ನು ಅಮಾನತುಗೊಳಿಸಲಾಗಿದ್ದು, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.