ಸಂಭಲ್: ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ದೇವಾಲಯ ʼಪುನರುಜ್ಜೀವನʼ ನಡೆಸಿದ ಆಡಳಿತ; ಒತ್ತುವರಿ ನಡೆದಿಲ್ಲ ಎಂದ ಸ್ಥಳೀಯ ಹಿಂದೂಗಳು
"ಹಿಂದೂಗಳು ಕಟ್ಟಿದ್ದ ಗೋಡೆಯನ್ನೇ ಅತಿಕ್ರಮಣ ಎಂದು ಗುರುತಿಸಲಾಗಿದೆ"
Photo credit: X
ಹೊಸದಿಲ್ಲಿ: ಉತ್ತರಪ್ರದೇಶದ ಸಂಭಲ್ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಪುರಾತನ ಶಿವ ದೇಗುಲ ಪತ್ತೆಯಾಗಿದೆ. ದೇವಸ್ಥಾನಕ್ಕೆ ಗೋಡೆಯನ್ನು ಕಟ್ಟಿ ಒತ್ತುವರಿ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಹಿಂದೂ ಸಮುದಾಯಕ್ಕೆ ಸೇರಿದ ಅಲ್ಲಿನ ಕೆಲ ನಿವಾಸಿಗಳು ಮಾತ್ರ ಈ ವಾದವನ್ನು ನಿರಾಕರಿಸಿದ್ದಾರೆ ಎಂದು thewire.in ವರದಿ ಮಾಡಿದೆ.
ಸಂಭಾಲ್ ನಲ್ಲಿ ಹಳೆಯ ದೇವಸ್ಥಾನವೊಂದು ಪತ್ತೆಯಾಗಿದೆ. ಆದರೆ, ಇದು ಮೊಘಲರ ಕಾಲದ ಶಾಹಿ ಜಾಮಾ ಮಸೀದಿ ಅಥವಾ ಯಾವುದೇ ಮಸೀದಿಯ ಅಡಿಯಲ್ಲಿ ಅಲ್ಲ. ಸಂಭಲ್ ಜಿಲ್ಲೆಯ ಮಹ್ಮೂದ್ ಖಾನ್ ಸರೈ ಪ್ರದೇಶದ ಶಾಹಿ ಜಾಮಾ ಮಸೀದಿ ಪಕ್ಕದ ಹಿಂದೂ ಕುಟುಂಬಕ್ಕೆ ಸೇರಿದ ಮನೆಯೊಂದರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ʼಪ್ರಾಚೀನʼ ಶಿವ ದೇಗುಲ ಪತ್ತೆಯಾಗಿದೆ.
ಸಂಭಾಲ್ ನ ಜಿಲ್ಲಾಡಳಿತ ಮತ್ತು ಪೊಲೀಸರು ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಸಣ್ಣ ದೇವಾಲಯವನ್ನು ಪುನರುಜ್ಜೀವನಗೊಳಿಸಿದ್ದಾರೆ. ದೇವಾಲಯ ಮತ್ತು ಅದರ ಸಮೀಪವಿರುವ ಬಾವಿಯನ್ನು ಸ್ವಚ್ಛಗೊಳಿಸಿ ಸ್ಥಳದಲ್ಲಿ ಹಿಂದೂ ಪೂಜೆ ಪುನರಾರಂಭಿಸಲಾಗಿದೆ. ದೇಗುಲವನ್ನು ಸ್ವಚ್ಛಗೊಳಿಸಿ ದೇವಸ್ಥಾನದ ಪ್ರಾಚೀನತೆಯನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್ ಕೈಗೊಳ್ಳುವಂತೆ ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯಕ್ಕೆ ಸೂಚಿಸಲಾಗಿದೆ.
ಸಂಭಾಲ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದರ್ ಪೆನ್ಸಿಯಾ ಮತ್ತು ಎಸ್ಪಿ ಕ್ರಿಶನ್ ಕುಮಾರ್ ಬಿಷ್ಣೋಯ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಧಿಕಾರಿಗಳು ಭದ್ರತಾ ಕ್ರಮವಾಗಿ ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಮತ್ತು ಪೊಲೀಸ್ ಕಾವಲುಗಳನ್ನು ನಿಯೋಜಿಸಿದ್ದಾರೆ.
ಇತ್ತೀಚೆಗೆ ಶಾಹಿ ಜಾಮಾ ಮಸೀದಿ ಸಮೀಕ್ಷೆಯ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ನಾಲ್ವರು ಮುಸ್ಲಿಂ ಯುವಕರು ಮೃತಪಟ್ಟಿದ್ದರು. 1978ರ ಕೋಮು ಹಿಂಸಾಚಾರದ ನಂತರ ಖಗ್ಗು ಸರಾಯ್ ಪ್ರದೇಶದಲ್ಲಿ ವಾಸಿಸುವ ಹಿಂದೂಗಳನ್ನು ಅಲ್ಲಿಂದ ತೆರಳುವಂತೆ ಸೂಚಿಸಲಾಗಿದೆ. ಅದು 46 ವರ್ಷಗಳ ಹಿಂದೆ, ಅಂದಿನಿಂದ ದೇವಾಲಯವನ್ನು ಹಾಗೆಯೇ ಬಿಡಲಾಗಿದೆ ಮತ್ತು ಅದರ ಸುತ್ತಲೂ ಗೋಡೆಯನ್ನು ನಿರ್ಮಿಸಲಾಗಿದೆ ಎಂದು ವಾದಿಸಲಾಗಿದೆ.
ಆದರೆ, ಸ್ಥಳೀಯ ಹಿಂದೂಗಳು ಈ ವಾದವನ್ನು ನಿರಾಕರಿಸಿದ್ದು, ಈ ಪ್ರದೇಶದಿಂದ ನಾವು ಬಂದರೂ ದೇವಾಲಯವು ನಮ್ಮ ನಿಯಂತ್ರಣದಲ್ಲೇ ಇತ್ತು. ದೇವಾಲಯವು 2006ರವರೆಗೆ ಕಾರ್ಯನಿರ್ವಹಿಸುತ್ತಿತ್ತು ಎಂದು ಧರ್ಮೇಂದ್ರ ರಸ್ತೋಗಿ ಹೇಳಿದ್ದಾರೆ. 1978ರ ಗಲಭೆಯ ನಂತರ ಖಗ್ಗು ಸಾರಾಯಿಯಲ್ಲಿರುವ ತಮ್ಮ ಮನೆಯನ್ನು ಮಾರಾಟ ಮಾಡಿದರೂ, ಆ ಪ್ರದೇಶದಲ್ಲಿ ವಾಸಿಸುವ ಮುಸ್ಲಿಮರು ದೇವಾಲಯಕ್ಕೆ ಭೇಟಿ ನೀಡುವುದನ್ನು ಎಂದಿಗೂ ತಡೆಯಲಿಲ್ಲ ಎಂದು ನಗರದ ಹಿಂದೂ ಸಭಾದ ಪೋಷಕರಾದ ಮತ್ತೊಬ್ಬ ವಿಷ್ಣು ಶರಣ ರಸ್ತೋಗಿ ಹೇಳಿದ್ದಾರೆ.
ಅರ್ಚಕರು ಇಲ್ಲಿ ವಾಸಿಸಲು ಸಾಧ್ಯವಾಗದ ಕಾರಣ ದೇವಾಲಯದ ನಿರ್ವಹಣೆ ಕಷ್ಟಕರವಾಗಿ ನಾವು ದೇವಾಲಯವನ್ನು ಮುಚ್ಚಬೇಕಾಯಿತು. ಗಲಭೆಗಳ ನಂತರ ನಮಗೆ ದೇವಾಲಯವನ್ನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಯಾರೂ ನಮ್ಮನ್ನು ಆಕ್ಷೇಪಿಸಲಿಲ್ಲ ಅಥವಾ ಬರದಂತೆ ತಡೆಯಲಿಲ್ಲ ಎಂದು ವಿಷ್ಣು ಶರಣ ರಸ್ತೋಗಿ ಹೇಳಿದ್ದಾರೆ.
ದೇವಾಲಯ ಎಷ್ಟು ಪುರಾತನವಾದದು ಎಂದು ತಿಳಿದಿಲ್ಲ. ಆದರೆ, ಹೆಚ್ಚುವರಿ ಎಸ್ಪಿ ಶ್ರೀಶ್ ಚಂದ್ರ ಮತ್ತು ಉಪ ಎಸ್ಪಿ ಅನುಜ್ ಚೌಧರಿ ಅವರು ಶಿವಲಿಂಗ ಮತ್ತು ಹನುಮಂತನ ವಿಗ್ರಹದಿಂದ ಕೊಳಕು ಮತ್ತು ಧೂಳನ್ನು ತೆಗೆದು ಶುದ್ದೀಕರಿಸಿದ್ದಾರೆ. ದೇವಸ್ಥಾನದಲ್ಲಿ ಗಂಟೆ ಬಾರಿಸಿದ್ದಾರೆ.
ಪತ್ತೆಯಾದ ಮೂರು ವಿಗ್ರಹಗಳು ಗಣೇಶ, ಪಾರ್ವತಿ ಮತ್ತು ಲಕ್ಷ್ಮಿಯದ್ದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಹೇಳಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿಯೂ ಹೇಳಿದ್ದಾರೆ. ದೇವಸ್ಥಾನದ ಹೆಸರೂ ಯಾರಿಗೂ ತಿಳಿದಿಲ್ಲ, ಆದರೆ ಡಿಸಿ ರಾಜೇಂದ್ರ ಪೆನ್ಸಿಯಾ ದೇವಸ್ಥಾನವನ್ನು 'ಕಾರ್ತಿಕ್ ಮಹಾದೇವ ಮಂದಿರ' ಎಂದು ಕರೆದಿದ್ದಾರೆ, ಸೋಮವಾರ ಸ್ಥಳೀಯರು ಇದನ್ನು ʼಪ್ರಾಚೀನ್ ಸಂಭಲೇಶ್ವರ ಮಂದಿರʼ ಎಂದು ಹೆಸರಿಸಿದ್ದಾರೆ,
ಅವರು ದೇವಸ್ಥಾನದ ಸುತ್ತಲಿನ "ಅತಿಕ್ರಮಣ" ಎನ್ನಲಾದ ಗೋಡೆಯನ್ನು ತೆರವುಗೊಳಿಸಿದ್ದಾರೆ. “ನಾವು ದೇವಸ್ಥಾನ ಮತ್ತು ಬಾವಿ ಬಗ್ಗೆ ಎಎಸ್ಐಗೆ ಪತ್ರ ಬರೆದಿದ್ದೇವೆ. ಒಮ್ಮೆ ಅವರು ಬಂದು ಕಾರ್ಬನ್ ಡೇಟಿಂಗ್ ನಡೆಸಿದರೆ, ದೇವಾಲಯ ಎಷ್ಟು ಹಳೆಯದು ಎಂದು ನಾವು ಕಂಡುಕೊಳ್ಳುತ್ತೇವೆ. ದೇವಸ್ಥಾನವನ್ನು ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪೆನ್ಸಿಯಾ ಹೇಳಿದ್ದಾರೆ.
ದೇವಸ್ಥಾನದ ಮೇಲೆ ಯಾವುದೇ ಒತ್ತುವರಿ ನಡೆದಿಲ್ಲ ಎಂದು ಸ್ಥಳೀಯರಾದ ಧರ್ಮೇಂದ್ರ ಅವರು ಹೇಳಿದ್ದು, ಹಿಂದೂಗಳೇ ಕಟ್ಟಡಕ್ಕೆ ರಕ್ಷಣಾತ್ಮಕವಾಗಿ ಗೋಡೆಯನ್ನು ಕಟ್ಟಿದ್ದಾರೆ. ಜಿಲ್ಲಾಡಳಿತವು ಅತಿಕ್ರಮಣ ಎಂದು ವಿವರಿಸಿದ ರಚನೆಯು ದೇವಾಲಯದಲ್ಲಿ ಒಂದು ಕೋಣೆಯಾಗಿದೆ. ದೇವಸ್ಥಾನ ಹೇಗಿತ್ತೋ ಹಾಗೆಯೇ ಇದೆ ಎಂದು ಧರ್ಮೇಂದ್ರ ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.