ಉತ್ತರ ಪ್ರದೇಶ | ಹೋಳಿ ಮೆರವಣಿಗೆ ಹಿನ್ನೆಲೆ ಸಂಭಾಲ್ನ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳನ್ನು ಟಾರ್ಪಾಲಿನ್ಗಳಿಂದ ಮುಚ್ಚಲು ನಿರ್ಧಾರ!

ಸಂಭಾಲ್ನ ಜಾಮಾ ಮಸೀದಿ (PTI)
ಲಕ್ನೋ : ಹೋಳಿ ಮೆರವಣಿಗೆಯ ಹಿನ್ನೆಲೆ ಉತ್ತರ ಪ್ರದೇಶದ ಸಂಭಾಲ್ ಪೊಲೀಸರು ಐತಿಹಾಸಿಕ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳನ್ನು ಮಾರ್ಚ್ 14ರಂದು ಪ್ಲಾಸ್ಟಿಕ್ ಮತ್ತು ಟಾರ್ಪಾಲಿನ್ಗಳಿಂದ ಮುಚ್ಚಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಈ ವರ್ಷ ಹೋಳಿಯು, ರಮಝಾನ್ ತಿಂಗಳ ಎರಡನೇ ಶುಕ್ರವಾರದ ದಿನ ನಡೆಯಲಿದೆ. ಹೋಳಿ ಮತ್ತು ಶುಕ್ರವಾರದ ಪ್ರಾರ್ಥನೆ ಎರಡೂ ಒಂದೇ ದಿನ ಬರುವ ಕಾರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಚರ್ಚೆ ನಡೆದಿತ್ತು.
ಎಎಸ್ಪಿ ಶ್ರೀಶಚಂದ್ರ ಈ ಕುರಿತು ಪ್ರತಿಕ್ರಿಯಿಸಿ, ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಹೋಳಿ ದಿನದಂದು ಮೆರವಣಿಗೆ ನಡೆಯುವ ಮಾರ್ಗಗಳಲ್ಲಿನ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳನ್ನು ಫ್ಲಾಸ್ಟಿಕ್ ಮತ್ತು ಟಾರ್ಪಾಲಿನ್ನಿಂದ ಮುಚ್ಚಲಾಗುತ್ತದೆ. ಈ ಕುರಿತು ಎರಡೂ ಕಡೆಯ ಜನರೊಂದಿಗೆ ಮಾತುಕತೆ ನಡೆಸಿ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಮಾತನಾಡಿ, ಹಬ್ಬಗಳ ಹಿನ್ನೆಲೆ ಶಾಂತಿ ಸಮಿತಿ ಸಭೆಗಳನ್ನು ನಡೆಸಿದ್ದೇವೆ, ವಿವಿಧ ವಲಯಗಳನ್ನು ರಚಿಸಲಾಗಿದೆ ಮತ್ತು ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಾವು ಸಂಪೂರ್ಣ ಭದ್ರತಾ ವ್ಯವಸ್ಥೆ ಮಾಡಿದ್ದೇವೆ. 250 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಡ್ರೋನ್ಗಳ ಮೂಲಕವೂ ಕಣ್ಗಾವಲಿಡಲಾಗುವುದು ಎಂದು ಹೇಳಿದರು.