ಹಿಮಾಚಲ ಪ್ರದೇಶ | ಸಿಎಂ ಬದಲು ಅವರ ಭದ್ರತಾ ಸಿಬ್ಬಂದಿಗೆ ಸಮೋಸ ಪೂರೈಕೆ; ಸಿಐಡಿಯಿಂದ ತನಿಖೆ!
ಸುಖ್ವಿಂದರ್ ಸಿಂಗ್ ಸುಖು (Photo: PTI)
ಧರ್ಮಶಾಲ: ಅಸಹಜ ಬೆಳವಣಿಗೆಯೊಂದರಲ್ಲಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖುಗೆ ಮೀಸಲಿರಿಸಲಾಗಿದ್ದ ಸಮೋಸ ಹಾಗೂ ಕೇಕ್ ಅನ್ನು ಅವರ ಭದ್ರತಾ ಸಿಬ್ಬಂದಿಗಳಿಗೆ ಪೂರೈಸಿರುವ ಕುರಿತು ಹಿಮಾಚಲ ಪ್ರದೇಶ ಸರಕಾರವು ತನಿಖೆಗೆ ಆದೇಶಿಸಿದೆ.
ಅಕ್ಟೋಬರ್ 21ರಂದು ಸಿಐಡಿ ಮುಖ್ಯ ಕಚೇರಿಗೆ ಸುಖು ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದಿದ್ದ ಈ ಘಟನೆಯನ್ನು ಸರಕಾರ ವಿರೋಧಿ ಎಂದು ಬಣ್ಣಿಸಿರುವ ಅಧಿಕಾರಿಯೊಬ್ಬರು, ಇದನ್ನು ಕೆಲವು ಕಾರ್ಯಸೂಚಿಗನುಗುಣವಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಿಐಡಿ ಮುಖ್ಯ ಕಚೇರಿಗೆ ಮುಖ್ಯಮಂತ್ರಿ ಸುಖು ಭೇಟಿ ನೀಡಿದ್ದಾಗ, ಉಪಾಹಾರಕ್ಕೆಂದು ಹೋಟೆಲ್ ರ್ಯಾಡಿಸನ್ ಬ್ಲೂನಿಂದ ಕನಿಷ್ಠ ಪಕ್ಷ ಮೂರು ಬಾಕ್ಸ್ ಸಮೋಸಗಳನ್ನು ತರಲಾಗಿತ್ತು ಎಂದು ಹೇಳಲಾಗಿದೆ.
ತನಿಖೆಯ ಸಂದರ್ಭದಲ್ಲಿ ಆ ಬಾಕ್ಸ್ ಗಳಲ್ಲಿದ್ದ ಆಹಾರ ಪದಾರ್ಥಗಳನ್ನು ಮುಖ್ಯಮಂತ್ರಿಗೆ ವಿತರಿಸಬೇಕಿತ್ತೆ ಎಂದು ಪ್ರವಾಸೋದ್ಯಮ ಇಲಾಖೆಯ ಕರ್ತವ್ಯನಿರತ ಸಿಬ್ಬಂದಿಗಳನ್ನು ಪ್ರಶ್ನಿಸಿದಾಗ, ಅವರು ಆ ಆಹಾರ ಪದಾರ್ಥಗಳು ಮುಖ್ಯಮಂತ್ರಿಗಳ ಮೆನುವಿನಲ್ಲಿ ಇರಲಿಲ್ಲ ಎಂದು ಉತ್ತರಿಸಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಘಟನೆಯ ಕುರಿತು ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂಬ ವರದಿಗಳನ್ನು ಅಲ್ಲಗಳೆದಿರುವ ಕಾಂಗ್ರೆಸ್ ಪಕ್ಷ, ತನ್ನ ನಿಯಮಗಳಿಗನುಸಾರವಾಗಿ ಸಿಐಡಿ ಈ ಕುರಿತು ಕ್ರಮ ಮುಂದುವರಿಸಿದೆ ಎಂದು ಸ್ಪಷ್ಟನೆ ನೀಡಿದೆ.