ಸ್ಯಾಮ್ಸಂಗ್ ವಿರುದ್ಧ ತೀವ್ರಗೊಂಡ ಹೋರಾಟ | 600 ಕಾರ್ಮಿಕರು, ಸಿಐಟಿಯು ಸದಸ್ಯರು ವಶಕ್ಕೆ
PC : ANI
ಚೆನ್ನೈ : ತಮಿಳುನಾಡಿನಲ್ಲಿರುವ ದಕ್ಷಿಣ ಕೊರಿಯಾ ಕಂಪೆನಿ ಸ್ಯಾಮ್ಸಂಗ್ನ ಗೃಹೋಪಯೋಗಿ ಉಪಕರಣಗಳ ತಯಾರಿಕಾ ಘಟಕದ ವಿರುದ್ಧದ ಪ್ರತಿಭಟನೆ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಕಂಪೆನಿಯ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸಿದ ಸುಮಾರು 600 ಕಾರ್ಮಿಕರು ಹಾಗೂ ಕಾರ್ಮಿಕ ಒಕ್ಕೂಟ ಸಿಐಟಿಯು ಸದಸ್ಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಚೆನ್ನೈ ನಗರದ ಸಮೀಪ ಇರುವ ಕಾರ್ಖಾನೆಯ ಹತ್ತಿರ ತಾತ್ಕಾಲಿಕ ಶಿಬಿರ ರಚಿಸಿ ಸಾವಿರಕ್ಕೂ ಅಧಿಕ ಕಾರ್ಮಿಕರು ಸೆಪ್ಟಂಬರ್ 9ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗೂ ಕಾರ್ಖಾನೆಯ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಈ ಘಟಕದಲ್ಲಿರುವ ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡಬೇಕು ಹಾಗೂ ವೇತನ ಏರಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸ್ಯಾಮ್ಸಂಗ್ನ ಉದ್ಯೋಗಿಗಳು ಹಾಗೂ ಕಾರ್ಮಿಕರ ಸಂಘಟನೆ ಸಿಐಟಿಯುನೊಂದಿಗೆ ಸಂಪರ್ಕ ಇರಿಸಿಕೊಂಡಿರುವ ಕಾರ್ಮಿಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನಾ ರ್ಯಾಲಿ ಚೆನ್ನೈ ಸಮೀಪ ಬಂದಾಗ ಅವರನ್ನು ಬಂಧಿಸಲಾಯಿತು. ಅನಂತರ ಅವರನ್ನು ನಾಲ್ಕು ಕಲ್ಯಾಣ ಮಂಟಪಗಳಲ್ಲಿ ಇರಿಸಲಾಯಿತು ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಚಾರ್ಲ್ಸ್ ಸ್ಯಾಮ್ ರಾಜದುರೈ ತಿಳಿಸಿದ್ದಾರೆ.
ಸೆಪ್ಟಂಬರ್ 16ರಂದು ಸ್ಯಾಮ್ಸಂಗ್ ವಿರುದ್ಧ ದಿನಪೂರ್ತಿ ಪ್ರತಿಭಟನೆ ನಡೆಸಿದ 104 ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದರು.
ಈ ಕುರಿತಂತೆ ಸ್ಯಾಮ್ ಸಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಲಯದಲ್ಲಿ ಇದೇ ರೀತಿಯ ಕೆಲಸ ಮಾಡುವ ಕಾರ್ಮಿಕರಿಗೆ ಪ್ರತಿ ತಿಂಗಳು ನೀಡುವ ಸರಾಸರಿ ವೇತನಕ್ಕಿಂತ ದುಪ್ಪಟ್ಟು ವೇತನ ಇಲ್ಲಿನ ಘಟಕದಲ್ಲಿ ಪೂರ್ಣಕಾಲಿಕವಾಗಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡಲಾಗುತ್ತಿದೆ. ಅಲ್ಲದೆ, ಈ ಕುರಿತು ಕಾರ್ಮಿಕರೊಂದಿಗೆ ಮಾತುಕತೆ ನಡೆಸಲು ಹಾಗೂ ಸಮಸ್ಯೆ ಪರಿಹರಿಸಲು ಕಂಪೆನಿ ಮುಕ್ತವಾಗಿದೆ ಎಂದು ಎಂದು ಈ ಹಿಂದೆ ಸ್ಯಾಮ್ಸಂಗ್ ಹೇಳಿತ್ತು.
ಸ್ಯಾಮ್ಸಂಗ್ ಕಾರ್ಮಿಕರು ಪ್ರತಿ ತಿಂಗಳು ಸರಾಸರಿ 20 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ಈ ವೇತವನ್ನು 36 ಸಾವಿರ ರೂ.ಗೆ ಏರಿಕೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.