ಕಾಂಗ್ರೆಸ್ ಜೊತೆಗಿನ ಮಾತುಕತೆಯನ್ನು ಮಮತಾ ಮುಂದುವರಿಸಲಿ: ಸಂಜಯ್ ರಾವುತ್

ಸಂಜಯ್ ರಾವುತ್ | PTI
ಕೋಲ್ಕತ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ ಒಂದು ದಿನದ ಬಳಿಕ, ಕಾಂಗ್ರೆಸ್ ಜೊತೆಗಿನ ಮಾತುಕತೆಯನ್ನು ಮಮತಾ ಬ್ಯಾನರ್ಜಿ ಮುಂದುವರಿಸಬೇಕೆಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ದಿಲ್ಲಿ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಪ್ರತಿಪಕ್ಷದ ವೈಫಲ್ಯಕ್ಕೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಕಾರಣ ಎಂದು ಸೋಮವಾರ ಆರೋಪಿಸಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ 294 ಸದಸ್ಯ ಬಲದ ವಿಧಾನಸಭೆಗೆ 2026ರಲ್ಲಿ ನಡೆಯುವ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ತನ್ನ ಸ್ವಂತ ಬಲದದಲ್ಲಿ ಮೂರನೇ ಎರಡು ಸ್ಥಾನಗಳನ್ನು ಗೆಲ್ಲುವುದು ಎಂಬುದಾಗಿಯೂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಯಾವತ್ತೂ ಸ್ವತಂತ್ರವಾಗಿ ಸ್ಪರ್ಧಿಸಿದೆ ಎನ್ನುವುದನ್ನು ಸಂಜಯ್ ರಾವುತ್ ಒಪ್ಪಿಕೊಂಡರು. ಆದರೂ, ಕಾಂಗ್ರೆಸ್ ಪಕ್ಷವು ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾದ ಅತಿ ದೊಡ್ಡ ಘಟಕವಾಗಿರುವುದರಿಂದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಕಾಂಗ್ರೆಸ್ನೊಂದಿಗಿನ ಮಾತುಕತೆಯನ್ನು ಮುಂದುವರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.