2019ರಲ್ಲಿ ಶಿಂದೆಯನ್ನು ಸಿಎಂ ಮಾಡಲು ಉದ್ಧವ್ ಬಯಸಿದ್ದರು; ಆದರೆ ಬಿಜೆಪಿ, ಎಂವಿಎ ಅದಕ್ಕೆ ಅವಕಾಶ ನೀಡಲಿಲ್ಲ: ಶಿವಸೇನೆ ನಾಯಕ ಸಂಜಯ್ ರಾವತ್

PC : PTI
ಮುಂಬೈ: 2019ರ ಚುನಾವಣೆಯ ನಂತರ, ಉದ್ಧವ್ ಠಾಕ್ರೆ ಅವರು ಏಕನಾಥ್ ಶಿಂದೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿಸಲು ಬಯಸಿದ್ದರು. ಆದರೆ, ಮೊದಲಿಗೆ ಬಿಜೆಪಿ, ನಂತರ ಶರದ್ ಪವಾರ್ ಒಳಗೊಂಡಂತೆ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಅದಕ್ಕೆ ತಡೆಯೊಡ್ಡಿದವು ಎಂದು ಬುಧವಾರ ಶಿವಸೇನೆ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, “ಮುಖ್ಯಾಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಲಾಗುವುದು ಎಂಬ ತನ್ನ ಭರವಸೆಯನ್ನು ಬಿಜೆಪಿ ಈಡೇರಿಸಲಿಲ್ಲ. ಹೀಗಾಗಿಯೇ ಶಿಂದೆ ಸರಕಾರವನ್ನು ಮುನ್ನಡೆಸುವ ಅವಕಾಶ ಕಳೆದುಕೊಂಡರು” ಎಂದು ತಿಳಿಸಿದ್ದಾರೆ.
“ಶಿಂದೆ ಮುಖ್ಯಮಂತ್ರಿಯಾಗಲು ಬಯಸಿದ್ದರು. ಆದರೆ, ಅವರು ತಮಗಿಂತ ಕಿರಿಯರು ಎಂಬ ಕಾರಣಕ್ಕೆ ಮಹಾವಿಕಾಸ್ ಅಘಾಡಿ ನಾಯಕರು ಅವರ ಕೈಕೆಳಗೆ ಕೆಲಸ ಮಾಡಲು ನಿರಾಕರಿಸಿದರು” ಎಂದೂ ಅವರು ಹೇಳಿದ್ದಾರೆ.
“ಶಿಂದೆಯನ್ನು ಮುಖ್ಯಮಂತ್ರಿಯನ್ನಾಗಿಸುವ ಯೋಜನೆಯನ್ನು ವಿರೋಧಿಸಿದ್ದು ಆಗ ಎನ್ಸಿಪಿಯ ಅಧ್ಯಕ್ಷರಾಗಿದ್ದ ಶರದ್ ಪವಾರ್ ಹಾಗೂ ಅಜಿತ್ ಪವಾರ್” ಎಂದು ಅವರು ದೂರಿದ್ದಾರೆ.
“2019ರಲ್ಲಿ ಶಿಂದೆಯನ್ನು ಮುಖ್ಯಮಂತ್ರಿಯನ್ನಾಗಿಸಲು ಉದ್ಧವ್ ಠಾಕ್ರೆ ಬಯಸಿದ್ದರು. ಶಿಂದೆಯನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರನ್ನಾಗಿಸಿದ್ದು, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಸಂಕೇತವಾಗಿತ್ತು” ಎಂದು ಅವರು ಪ್ರತಿಪಾದಿಸಿದ್ದಾರೆ.
ಅವಿಭಜಿತ ಶಿವಸೇನೆಯ ಮುಖ್ಯಸ್ಥರಾಗಿದ್ದ ಉದ್ಧವ್ ಠಾಕ್ರೆ, 2019ರ ಚುನಾವಣೆಯ ನಂತರ ಮುಖ್ಯಮಂತ್ರಿ ಹುದ್ದೆಯ ವಿಚಾರವಾಗಿ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡು, ಕಾಂಗ್ರೆಸ್ ಹಾಗೂ ಅವಿಭಜಿತ ಎನ್ಸಿಪಿಯೊಂದಿಗೆ ಮಹಾವಿಕಾಸ್ ಅಘಾಡಿ ಮೈತ್ರಿಕೂಟವನ್ನು ರಚಿಸಿದ್ದರು. ನಂತರ, ತಾವೇ ಮುಖ್ಯಮಂತ್ರಿ ಆಗಿದ್ದರು.
ಜೂನ್ 2022ರಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದ ಏಕನಾಥ್ ಶಿಂದೆ, ಶಿವಸೇನೆಯನ್ನು ವಿಭಜಿಸಿ ಬಿಜೆಪಿಯೊಂದಿಗೆ ಸರಕಾರ ರಚಿಸಿದ್ದರು. ಅವರೀಗ ದೇವೇಂದ್ರ ಫಡ್ನವಿಸ್ ನೇತೃತ್ವದ ಸರಕಾರದಲ್ಲಿ ಕಳೆದ ವರ್ಷ ಎನ್ಸಿಪಿಯನ್ನು ವಿಭಜಿಸಿದ್ದ ಅಜಿತ್ ಪವಾರ್ ರೊಂದಿಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಂಡಿದ್ದಾರೆ.