ಬಿಜೆಪಿಯಲ್ಲಿನ ಕೆಲವರು ಉದ್ಧವ್ ನೇತೃತ್ವದ ಶಿವಸೇನೆಯೊಂದಿಗೆ ಮೈತ್ರಿ ಬಯಸಿದ್ದಾರೆ: ಸಂಜಯ್ ರಾವತ್
ತಿರುಗೇಟು ನೀಡಿದ ಫಡ್ನವಿಸ್

ಸಂಜಯ್ ರಾವತ್ (PTI)
ಮುಂಬೈ: ಆಡಳಿತಾರೂಢ ಬಿಜೆಪಿಯಲ್ಲಿನ ಕೆಲ ನಾಯಕರು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯೊಂದಿಗೆ ಮೈತ್ರಿ ಬಯಸುತ್ತಿದ್ದಾರೆ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದು, ಈ ಹೇಳಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದ್ದಾರೆ.
ಹಾಗೆಯೇ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿನ ಕೆಲ ನಾಯಕರೂ ಬಿಜೆಪಿಯೊಂದಿಗೆ ಮೈತ್ರಿ ಬಯಸುತ್ತಿದ್ದಾರೆ. ಆದರೆ, ಇಂತಹ ಚರ್ಚೆಗಳು ಇದುವರೆಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಅಂತಹ ಸಾಧ್ಯತೆ ಇರಬಹುದು. ಆದರೆ, ಬಿಜೆಪಿಯಲ್ಲಿನ ಕೆಲ ನಾಯಕರಿಂದಾಗಿ ನಾವು ಮಹಾ ವಿಕಾಸ್ ಅಘಾಡಿಯೊಂದಿಗೆ ಹೋದೆವು. ನೀವು ನಮ್ಮ ಪಕ್ಷವನ್ನು ವಿಭಜನೆ ಮಾಡಿದಿರಿ ಹಾಗೂ ನಾವು ಏಕನಾಥ್ ಶಿಂದೆಗಾಗಿ ನ್ಯಾಯಯುತವಾಗಿ ಆಗ್ರಹಿಸುತ್ತಿದ್ದುದ್ದನ್ನು ನೀವೇ ನೀಡಿದಿರಿ” ಎಂದು ಗುರುವಾರ ಸಂಜಯ್ ರಾವತ್ ಹೇಳಿದ್ದಾರೆ. ಅವರು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯೇನಾದರೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಿದ್ದೆಯೆ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದರು.
“ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಿಜೆಪಿಯೊಂದಿಗೆ ಉಳಿಯುವ ಬಗ್ಗೆ ನಮಗೆ ಅನುಮಾನವಿದೆ. ನಾವು ಕಾದು ನೋಡುವ ಯೋಚನೆಯಲ್ಲಿದ್ದೇವೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯೊಳಗೆ ಇಂತಹ ಯಾವುದೇ ಚರ್ಚೆಗಳು ನಡೆದಿರದಿದ್ದರೂ, ನಮ್ಮ ಪಕ್ಷದ ಕೆಲ ಸದಸ್ಯರಲ್ಲೂ ಇಂತಹುದೇ ಭಾವನೆ ಇರುವಂತಿದೆ” ಎಂದು ಅವರು ಹೇಳಿದ್ದಾರೆ.
ಬುಧವಾರ ರಾತ್ರಿ ಶಾಸಕ ಪರಾಗ್ ಅಲವನಿ ಪುತ್ರಿ ವಿವಾಹೋತ್ಸವದ ಸಂದರ್ಭದಲ್ಲಿ ಉದ್ಧವ್ ಠಾಕ್ರೆಯ ನಿಕಟವರ್ತಿ ಹಾಗೂ ವಿಧಾನ ಪರಿಷತ್ ಸದಸ್ಯ ಮಿಲಿಂದ್ ನಾರ್ವೇಕರ್ ಹಾಗೂ ಮಹಾರಾಷ್ಟ್ರ ಸಚಿವ ಹಾಗೂ ಬಿಜೆಪಿ ನಾಯಕ ಚಂದ್ರಕಾಂತ್ ಪಾಟೀಲ್ ನಡುವೆ ನಡೆದ ಮಾತುಕತೆ ನಂತರ ಸಂಜಯ್ ರಾವತ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.