ಕಾಂಗ್ರೆಸ್ ಸೇರ್ಪಡೆಗೆ ಸಂಜಯ್ ರಾವತ್ ಮಾತುಕತೆ ನಡೆಸುತ್ತಿದ್ದಾರೆ : ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ

ಸಂಜಯ್ ರಾವತ್ (PTI)
ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಪ್ರಮುಖ ನಾಯಕ ಸಂಜಯ್ ರಾವತ್ ಕಾಂಗ್ರೆಸ್ ಸೇರಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ಮತ್ತು ಬಿಜೆಪಿ ಶಾಸಕ ನಿತೇಶ್ ರಾಣೆ ರವಿವಾರ ಹೇಳಿದ್ದಾರೆ.
ಸಂಜಯ್ ರಾವತ್ ಅವರ ರಾಜ್ಯಸಭಾ ಅವಧಿ ಕೊನೆಗೊಳ್ಳುತ್ತಿದೆ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಮತ್ತೊಂದು ಅವಧಿಗೆ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಶಾಸಕರನ್ನು ಹೊಂದಿಲ್ಲ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉದ್ಧವ್ ನೇತೃತ್ವದ ಶಿವಸೇನೆ 20 ಸ್ಥಾನಗಳನ್ನು ಗೆದ್ದಿದೆ. ರಾವತ್ ಅವರು ಉದ್ಧವ್ ನೇತೃತ್ವದ ಶಿವಸೇನೆಯಲ್ಲಿ ಎಷ್ಟು ದಿನಗಳ ಕಾಲ ಇರುತ್ತಾರೆ ಎಂಬುವುದರ ಬಗ್ಗೆ ಕೂಡ ಸಾಮ್ನಾದಲ್ಲಿ ಬರೆಯಬೇಕು. ಕಾಂಗ್ರೆಸ್ ಸೇರಲು ದಿಲ್ಲಿಯಲ್ಲಿ ಮಾತುಕತೆ ನಡೆಸುತ್ತಿರುವ ಬಗ್ಗೆಯೂ ಬರೆಯಬೇಕು ಎಂದು ನಿತೇಶ್ ರಾಣೆ ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವಿನ ಭಿನ್ನಾಭಿಪ್ರಾಯವು ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಂಜಯ್ ರಾವತ್ ಸಾಮ್ನಾದಲ್ಲಿ ಬರೆದಿರುವ ಬೆನ್ನಲ್ಲೇ ನಿತೇಶ್ ರಾಣೆ ಅವರ ಈ ಹೇಳಿಕೆ ಹೊರ ಬಿದ್ದಿದೆ.