ಸೌದಿ ಅರೇಬಿಯಾದಿಂದ ಆಗಮಿಸಿದ ವಿಮಾನದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಪತ್ರ ಪತ್ತೆ

ಸಾಂದರ್ಭಿಕ ಚಿತ್ರ | PC : Canva
ಅಹ್ಮದಾಬಾದ್: ಸೌದಿ ಅರೇಬಿಯಾದಿಂದ ಸೋಮವಾರ ಅಹ್ಮದಾಬಾದ್ಗೆ ಆಗಮಿಸಿದ ವಿಮಾನದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಪತ್ರ ಪತ್ತೆಯಾಗಿದೆ.
ಬೆದರಿಕೆಯ ಪತ್ರ ಪತ್ತೆಯಾದ ಬಳಿಕ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು ಹಾಗೂ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೌದಿ ಅರೇಬಿಯಾದಿಂದ ಆಗಮಿಸಿದ ವಿಮಾನ ಇಳಿದ ಬಳಿಕ ಭದ್ರತಾ ಪರಿಶೀಲನೆ ನಡೆಸುತ್ತಿರುವ ಸಂದರ್ಭ ವಿಮಾನದ ಒಳಗೆ ಈ ಬೆದರಿಕೆಯ ಪತ್ರ ಪತ್ತೆಯಾಯಿತು. ಪ್ರಯಾಣಿಕರೊಬ್ಬರ ಆಸನದ ಅಡಿಯಲ್ಲಿ ಈ ಬೆದರಿಕೆಯ ಪತ್ರ ಕಂಡು ಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆದರಿಕೆಯ ಪತ್ರ ಪತ್ತೆಯಾದ ಬಳಿಕ ಸ್ಥಳೀಯ ಪೊಲೀಸರು, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ (ಬಿಡಿಡಿಎಸ್) ಹಾಗೂ ಭದ್ರತಾ ಸಂಸ್ಥೆಗಳು ವಿಮಾನದ ಒಳಗೆ ಶೋಧ ಕಾರ್ಯಾಚರಣೆ ನಡೆಸಿದವು ಎಂದು ಗುಜರಾತ್ ಕ್ರೈಮ್ ಬ್ರಾಂಚ್ನ ಜಂಟಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್ ತಿಳಿಸಿದ್ದಾರೆ.