ಕೇಂದ್ರ ಸರಕಾರವನ್ನು ರಕ್ಷಿಸುವುದು ಎಸ್ ಬಿ ಐ ಉದ್ದೇಶ : ಮಾಜಿ ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಚುನಾವಣಾ ಆಯೋಗಕ್ಕೆ ಪತ್ರ
ಚುನಾವಣಾ ಆಯೋಗ | Photo: PTI
ಹೊಸದಿಲ್ಲಿ : ಚುನಾವಣಾ ಬಾಂಡ್ ಗಳ ಕುರಿತ ಮಾಹಿತಿ ಬಹಿರಂಗ ಪಡಿಸುವ ಗಡುವನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ)ನ ಕ್ರಮವು ಕೇಂದ್ರ ಸರಕಾರವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳ ಗುಂಪೊಂದು ಶನಿವಾರ ಹೇಳಿದ್ದಾರೆ.
ಚುನಾವಣಾ ಆಯೋಗಕ್ಕೆ ಬರೆದ ಪತ್ರವೊಂದರಲ್ಲಿ ಅವರು ಈ ಆರೋಪವನ್ನು ಮಾಡಿದ್ದಾರೆ.
ಮಾರ್ಚ್ 4ರಂದು, ಚುನಾವಣಾ ಬಾಂಡ್ ಗಳ ವಿವರಗಳನ್ನು ಸಲ್ಲಿಸಲು ನೀಡಿರುವ ಗಡುವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ಕೋರಿ ಭಾರತೀಯ ಸ್ಟೇಟ್ ಬ್ಯಾಂಕ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.
ತಾನು ದಾಖಲೆಗಳನ್ನು ಕೈಯಿಂದ ಕಾಗದಗಳಲ್ಲಿ ಬರೆದು ಸಂಗ್ರಹಿಸಿಡುತ್ತಿರುವೆ ಎಂಬ ‘‘ದಯನೀಯ ನೆವ’’ವೊಂದನ್ನು 48 ಕೋಟಿ ಖಾತೆಗಳನ್ನು ಹೊಂದಿರುವ ಮತ್ತು ಅತ್ಯುನ್ನತ ಮಟ್ಟದ ಡಿಜಿಟಲೀಕರಣವನ್ನು ಸಾಧಿಸಿರುವುದಾಗಿ ಹೇಳಿಕೊಳ್ಳುತ್ತಿರುವ ಭಾರತದ ಅತಿ ದೊಡ್ಡ ಬ್ಯಾಂಕ್ ಕೊಟ್ಟಿದೆ ಎಂದು ‘ಕಾನ್ಸ್ಟಿಟ್ಯೂಶನಲ್ ಕಾಂಡಕ್ಟ್ ಗ್ರೂಪ್’ನ ಭಾಗವಾಗಿರುವ ಮಾಜಿ ಐಎಎಸ್/ಐಪಿಎಸ್ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಫೆಬ್ರವರಿ 15ರಂದು ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಯೋಜನೆಯು ‘‘ಅಸಾಂವಿಧಾನಿಕ’’ ಮತ್ತು ದೇಣಿಗೆದಾರರು ಮತ್ತು ರಾಜಕೀಯ ಪಕ್ಷಗಳ ನಡುವೆ ‘‘ಕೊಡುಕೊಳ್ಳುವ ವ್ಯವಹಾರ’’ಗಳಿಗೆ ಕಾರಣವಾಗಬಹುದು ಎಂದು ನ್ಯಾಯಾಲಯ ಹೇಳಿತ್ತು. ಅದೂ ಅಲ್ಲದೆ, 2019 ಎಪ್ರಿಲ್ 12ರ ಬಳಿಕ ಚುನಾವಣಾ ಬಾಂಡ್ ಗಳನ್ನು ಖರೀದಿಸಿದ ದೇಣಿಗೆದಾರರು ಮತ್ತು ಅವುಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆಯೂ ಸುಪ್ರೀಂ ಕೋರ್ಟ್ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಆದೇಶ ನೀಡಿತ್ತು.
ಚುನಾವಣಾ ಬಾಂಡ್ ಯೋಜನೆಗಾಗಿ ತಂತ್ರಾಂಶ ಸಿದ್ಧಪಡಿಸಲು ಭಾರತೀಯ ಸ್ಟೇಟ್ ಬ್ಯಾಂಕ್ 2018ರಲ್ಲಿ ಕೇಂದ್ರ ಸರಕಾರದಿಂದ 60 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ಕೋರಿತ್ತು ಎಂಬುದಾಗಿ ಅಖಿಲ ಭಾರತ ಬ್ಯಾಂಕಿಂಗ್ ಅಧಿಕಾರಿಗಳ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಥಾಮಸ್ ಫ್ರಾಂಕೊ ನೀಡಿರುವ ಹೇಳಿಕೆಯತ್ತ ಚುನಾವಣಾ ಆಯೋಗಕ್ಕೆ ಬರೆಯಲಾಗಿರುವ ಪತ್ರವು ಬೆಟ್ಟು ಮಾಡಿದೆ.
ಬಾಂಡ್ ಗಳ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲು 10 ನಿಮಿಷಕ್ಕಿಂತ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂಬ ಅಂಶದತ್ತ ಚುನಾವಣಾ ಬಾಂಡ್ ಯೋಜನೆಯನ್ನು ಅಂತಿಮಗೊಳಿಸುವಾಗ ಹಣಕಾಸು ಕಾರ್ಯದರ್ಶಿಯಾಗಿದ್ದ ಸುಭಾಶ್ ಚಂದ್ರ ಗಾರ್ಗ್ ಹಲವು ಸಂದರ್ಶನಗಳಲ್ಲಿ ಬೆಟ್ಟು ಮಾಡಿದ್ದಾರೆ ಎಂದು ಈ ಗುಂಪು ಹೇಳಿದೆ.
‘‘ಚುನಾವಣಾ ಬಾಂಡ್ ಗಳ ಕುರಿತ ಮಾಹಿತಿಯನ್ನು ಎಸ್ ಬಿ ಐ ನಿರಾಕರಿಸಿದೆ ಮತ್ತು ಅದು ಲೋಕಸಭಾ ಚುನಾವಣೆ ಮುಕ್ತಾಯಗೊಳ್ಳುವ ಮೊದಲು ಲಭಿಸುವುದಿಲ್ಲ ಎಂಬ ಸೂಚನೆಯನ್ನು ನೀಡಿದೆ. ಚುನಾವಣಾ ಬಾಂಡ್ ಯೋಜನೆಯಲ್ಲಿ ಸರಕಾರ ಮತ್ತು ದೇಣಿಗೆದಾರರ ನಡುವೆ ಕೊಡುಕೊಳ್ಳುವಿಕೆಯ ವ್ಯವಹಾರ ನಡೆದಿದೆ, ಕೆಲವು ಕಂಪೆನಿಗಳಿಗೆ ಲಾಭ ಮಾಡಿ ಕೊಡಲಾಗಿದೆ ಮತ್ತು ದೊಡ್ಡ ಮೊತ್ತಗಳ ದೇಣಿಗೆ ನೀಡುವಂತೆ ಕಂಪೆನಿಗಳ ಮೇಲೆ ಒತ್ತಡ ಹೇರಲು ಅವುಗಳನ್ನು ಬೆದರಿಸಲಾಗಿದೆ ಅಥವಾ ದಾಳಿಗಳನ್ನು ನಡೆಸಲಾಗಿದೆ ಎಂಬ ಆರೋಪಗಳಿಂದ ಸರಕಾರವನ್ನು ರಕ್ಷಿಸುವುದು ದೇಶದ ಅತಿ ದೊಡ್ಡ ಬ್ಯಾಂಕ್ನ ಉದ್ದೇಶವಾಗಿದೆ ಎಂಬಂತೆ ಕಾಣಿಸುತ್ತಿದೆ’’ ಎಂದು ಚುನಾವಣಾ ಆಯೋಗಕ್ಕೆ ಮಾಜಿ ಐಎಎಸ್/ಐಪಿಎಸ್ ಅಧಿಕಾರಿಗಳು ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.
2018-19 ಮತ್ತು 2022-23ರ ಹಣಕಾಸು ವರ್ಷಗಳ ನಡುವಿನ ಅವಧಿಯಲ್ಲಿ ಕನಿಷ್ಠ 30 ಕಂಪೆನಿಗಳು ಬಿಜೆಪಿಗೆ ಸುಮಾರು 335 ಕೋಟಿ ರೂಪಾಯಿ ದೇಣಿಗೆಗಳನ್ನು ನೀಡಿವೆ ಮತ್ತು ಇದೇ ಅವಧಿಯಲ್ಲಿ ಈ ಕಂಪೆನಿಗಳು ಕೇಂದ್ರ ಸರಕಾರದ ಸಂಸ್ಥೆಗಳಿಂದ ಕ್ರಮಗಳನ್ನು ಎದುರಿಸಿದ್ದವು ಎಂಬುದಾಗಿ ಆರೋಪಿಸುವ ‘ನ್ಯೂಸ್ಲಾಂಡ್ರಿ’ ಮತ್ತು ‘ದ ನ್ಯೂಸ್ ಮಿನಿಟ್’ ವೆಬ್ಸೈಟ್ ಗಳ ವರದಿಗಳನ್ನೂ ಪತ್ರವು ಉಲ್ಲೇಖಿಸಿದೆ.
ಚುನಾವಣಾ ಬಾಂಡ್ ಗಳ ವಿವರಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನೀಡುವವರೆಗೆ 2024ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸದಂತೆ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.