ಅಣಕು ಮತದಾನದ ವೇಳೆ ಬಿಜೆಪಿಗೆ ಮತ: ಇವಿಎಂ ಕುರಿತ ಆರೋಪದ ತನಿಖೆಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ಮಾಡಿರುವ ಆರೋಪಗಳನ್ನು ಪರಿಶೀಲಿಸಿ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇವಿಎಂಗಳಲ್ಲಿ ಚಲಾವಣೆಯಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್ಗಳೊಂದಿಗೆ ತಾಳೆ ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಹಲವು ಅರ್ಜಿಗಳ ಪೈಕಿ ಅರ್ಜಿದಾರರೊಬ್ಬರ ವಕೀಲರಾದ ಪ್ರಶಾಂತ್ ಭೂಷಣ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮೇಲಿನ ಸೂಚನೆ ನೀಡಿದೆ.
ದಯವಿಟ್ಟು ಈ ಆರೋಪಗಳನ್ನು ಪರೀಶೀಲಿಸಿ ತನಿಖೆ ನಡೆಸಿ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರ ದ್ವಿಸದಸ್ಯ ಪೀಠ ಆಯೋಗದ ವಕೀಲರಾದ ಮಣೀಂದರ್ ಸಿಂಗ್ ಅವರಿಗೆ ಹೇಳಿತು.
ಕೇರಳದಲ್ಲಿ ಅಣಕು ಮತದಾನ ಫಲಿತಾಂಶಗಳ ಕುರಿತಾದ ವರದಿಯಲ್ಲಿ ಬಿಜೆಪಿಗೆ ಹೆಚ್ಚುವರಿ ಮತಗಳು ಬಿದ್ದಿರುವ ಕುರಿತು ಪ್ರಶಾಂತ್ ಭೂಷಣ್ ಉಲ್ಲೇಖಿಸಿದರು.
ಎಪ್ರಿಲ್ 17ರಂದು ಕೇರಳದ ಕಾಸರಗೋಡಿನಲ್ಲಿ ನಡೆದ ಅಣಕು ಮತದಾನದಲ್ಲಿ ಕನಿಷ್ಠ ನಾಲ್ಕು ಇವಿಎಂಗಳು ಬಿಜೆಪಿ ಪರ ತಪ್ಪಾಗಿ ಮತಗಳನ್ನು ದಾಖಲಿಸಿದ್ದವು ಎಂಬ ಮಾಧ್ಯಮ ವರದಿಯನ್ನು ಭೂಷಣ್ ಉಲ್ಲೇಖಿಸಿದ್ದರು.