ಪೂಜಾ ಸ್ಥಳಗಳ ಕಾಯ್ದೆ | ಅರ್ಜಿಗಳ ವಿಚಾರಣೆಗೆ ಸಿಜಿಐ ನೇತೃತ್ವದಲ್ಲಿ ವಿಶೇಷ ಪೀಠ ರಚಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಪೂಜಾ ಸ್ಥಳಗಳ ಕಾಯ್ದೆ (ವಿಶೇಷ ಅವಕಾಶಗಳು), 1991 ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ವಿಶೇಷ ಪೀಠವೊಂದನ್ನು ರಚಿಸಿದ್ದಾರೆ. ಈ ಶಾಸನವು ಆಗಸ್ಟ್ 15, 1947ರ ಹಿಂದೆ ನಿರ್ಮಾಣವಾಗಿದ್ದ ಧಾರ್ಮಿಕ ಸ್ಥಳಗಳ ಗುರುತು ಹಾಗೂ ಸ್ವರೂಪಕ್ಕೆ ರಕ್ಷಣೆ ಒದಗಿಸುತ್ತದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಈ ಪೀಠವು ನ್ಯಾ. ಸಂಜಯ್ ಕುಮಾರ್ ಹಾಗೂ ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡಿದೆ. ಈ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ 12ರ ಮಧ್ಯಾಹ್ನ 3.30 ಗಂಟೆಗೆ ನಿಗದಿಗೊಳಿಸಲಾಗಿದೆ. 1991ರ ಈ ಕಾಯ್ದೆಯ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳಿಗೆ ಈ ಪ್ರಕರಣ ಸಂಬಂಧಿಸಿದೆ.
ವಕೀಲ ಅಶ್ವಿಮನಿ ಕುಮಾರ್ ಉಪಾಧ್ಯಾಯ್ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳಲ್ಲಿ ಆಕ್ರಮಣ ಮತ್ತು ಅತಿಕ್ರಮಣಕ್ಕೆ ತುತ್ತಾಗಿರುವ ತಮ್ಮ ಈ ಹಿಂದಿನ ಪೂಜಾ ಸ್ಥಳಗಳ ಮೇಲೆ ಮರು ಹಕ್ಕು ಸ್ಥಾಪಿಸಲು ನ್ಯಾಯಾಲಯಗಳ ಮೆಟ್ಟಿಲೇರುವುದರಿಂದ ಹಿಂದೂಗಳು, ಜೈನರು, ಬುದ್ಧರು ಹಾಗೂ ಸಿಖ್ಖರನ್ನು ಈ ಕಾಯ್ದೆ ನಿರ್ಬಂಧಿಸುತ್ತದೆ ಎಂದು ವಾದಿಸಲಾಗಿದೆ.
ಆದರೆ, ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಜಮಾಯತ್ ಉಲಾಮ-ಇ-ಹಿಂದ್ ನಂತಹ ಸಂಘಟನೆಗಳು ಈ ಅರ್ಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸೋಗಿನಲ್ಲಿ ಸಂವಿಧಾನದ ಭ್ರಾತೃತ್ವ ಮತ್ತು ಜಾತ್ಯತೀತತೆ, ಸಂವಿಧಾನ ಪೀಠಿಕೆಯ ಆಶಯ ಹಾಗೂ ಮೂಲಭೂತ ರಚನೆಯ ಭಾಗಗಳನ್ನು ರಕ್ಷಿಸುವ ಕೇಂದ್ರ ಶಾಸನವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಈ ಸಂಘಟನೆಗಳು ವಾದಿಸಿವೆ.
1991ರ ಕಾಯ್ದೆ ನಮ್ಮ ಇತಿಹಾಸ ಹಾಗೂ ಭವಿಷ್ಯದ ಕುರಿತು ಮಾತನಾಡಿದೆ. ವರ್ತಮಾನ ಹಾಗೂ ಭವಿಷ್ಯವನ್ನು ಹತ್ತಿಕ್ಕಲು ಇತಿಹಾಸ ಹಾಗೂ ಇತಿಹಾಸದಲ್ಲಿ ನಡೆದಿರುವ ಯಾವುದೇ ಅನಿಶ್ಚಿತ ಸಂಗತಿಗಳನ್ನು ಸಾಧನವನ್ನಾಗಿ ಬಳಸಬಾರದು ಎಂದು ಸಂಸತ್ತು ಕಡ್ಡಾಯಗೊಳಿಸಿದೆ ಎಂಬುದನ್ನು ಅಯೋಧ್ಯೆ ತೀರ್ಪಿನಲ್ಲೂ ಪರಿಗಣಿಸಲಾಗಿದೆ ಎಂದು ಎಂಬುದರತ್ತ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಬೊಟ್ಟು ಮಾಡಿದೆ.
ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಗ್ಯಾನವಾಪಿ ಮಸೀದಿಯ ಆಡಳಿತ ಮಂಡಳಿಯೂ ಮನವಿ ಮಾಡಿದೆ.
ವಾಕ್ಚಾತುರ್ಯದ ವಾದಗಳು ಹಾಗೂ ಮೊಘಲರ ಅವಧಿಯಲ್ಲಿನ ಆಡಳಿತಗಾರರಿಂದ ತೊಂದರೆಯಾಗಿದೆ ಎಂಬ ಆರೋಪಗಳು ಪೂಜಾಸ್ಥಳಗಳ ಕಾಯ್ದೆ(ವಿಶೇಷ ಅವಕಾಶಗಳು)ಯ ಶಾಸನಾತ್ಮಕ ಜಾರಿಯ ಮಾನ್ಯತೆಯನ್ನು ಪ್ರಶ್ನಿಸಲು ಆಧಾರವಾಗುವುದಿಲ್ಲ ಎಂದು ಗ್ಯಾನವಾಪಿ ಮಸೀದಿಯನ್ನು ಪ್ರತಿನಿಧಿಸುತ್ತಿರುವ ಅಂಜುಮಾನ್ ಇಂತೆಝಾಮಿಯ ಮಸಜಿದ್ ವಾರಾಣಸಿಯ ಆಡಳಿತ ಮಂಡಳಿ ಸಮಿತಿ ವಾದಿಸಿದೆ.
ಮಸೀದಿಯ ಕೆಳಗೆ ದೇವಾಲಯದ ಅಸ್ತಿತ್ವವಿದೆ ಹಾಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದೂ ಅರ್ಜಿದಾರರು ಗ್ಯಾನವಾಪಿ ಮಸೀದಿಯ ವಿರುದ್ಧ ಹಲವು ಸಿವಿಲ್ ಮೊಕದ್ದಮೆಗಳನ್ನು ಹೂಡಿರುವುದರಿಂದ, ಅದೀಗ ವಿವಾದದ ಕೇಂದ್ರ ಬಿಂದುವಾಗಿ ಬದಲಾಗಿದೆ.
ಸುಪ್ರೀಂ ಕೋರ್ಟ್ ನೀಡಲಿರುವ ನಿರ್ಣಾಯಕ ತೀರ್ಪು ಪ್ರಾಚೀನ ದೇವಾಲಯಗಳ ಮೇಲೆ ಮರು ಹಕ್ಕು ಪ್ರತಿಪಾದಿಸಿರುವ ಸಿವಿಲ್ ಮೊಕದ್ದಮೆಗಳ ಭವಿಷ್ಯವನ್ನು ನಿರ್ಧರಿಸಲಿದೆ.
ಈಗಿನ ನೆಲದ ಕಾನೂನಿನ್ವಯ ಮೊಘಲ್ ಆಡಳಿತಗಾರರು ಹಿಂದೂ ಪ್ರಾರ್ಥನಾ ಸ್ಥಳಗಳ ಮೇಲೆ ನಡೆಸಿರುವ ದಾಳಿಗಳ ಆಧಾರದಲ್ಲಿ ಅವುಗಳ ಮೇಲೆ ಮರು ಹಕ್ಕು ಸ್ಥಾಪಿಸುವ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಯೋಧ್ಯೆ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಗ್ಯಾನವಾಪಿ ಮಸೀದಿ ಆಡಳಿತ ಮಂಡಳಿ ಉಲ್ಲೇಖಿಸಿದೆ.
“ಹಲವಾರು ಪ್ರಾಚೀನ ಆಡಳಿತಗಾರರ ಕ್ರಮದ ವಿರುದ್ಧ ಯಾವುದಾದರೂ ವ್ಯಕ್ತಿ ಸಮಾಧಾನ ಮತ್ತು ಆಸರೆಯನ್ನು ಬಯಸಿದರೆ, ಅದಕ್ಕೆ ಕಾನೂನು ಉತ್ತರವಲ್ಲ” ಎಂದು ರಾಮಜನ್ಮ ಭೂಮಿ ತೀರ್ಪಿನಲ್ಲಿ ಅಭಿಪ್ರಾಯ ಪಡಲಾಗಿದೆ.
ಆದರೆ, 1991ರ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿರುದ್ಧ ಪ್ರಮಾಣ ಪತ್ರ ಸಲ್ಲಿಸುವ ಭರವಸೆ ನೀಡುವ ಕುರಿತು ಕೇಂದ್ರ ಸರಕಾರ ಇದುವರೆಗೂ ತುಟಿ ಬಿಚ್ಚಿಲ್ಲ.
ಮಸೀದಿಗಳ ಮೂಲ ಹಾಗೂ ಸ್ವರೂಪವನ್ನು ಪ್ರಶ್ನಿಸಿ ರಾಜಸ್ಥಾನ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಸಲ್ಲಿಕೆಯಾಗಿರುವ ಸಿವಿಲ್ ಮೊಕದ್ದಮೆಗಳಲ್ಲಿ ಸ್ಥಳೀಯ ನ್ಯಾಯಾಲಯಗಳು ಅತಿರೇಕದ ಮಧ್ಯಪ್ರವೇಶ ಮಾಡಿರುವ ಬೆನ್ನಿಗೇ, ವಿಶೇಷ ನ್ಯಾಯಪೀಠ ರಚನೆಯಾಗಿದ್ದು, ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಸೌಜನ್ಯ: thehindu.com