ಎನ್ಐಎ ಅಧಿಕಾರವನ್ನು ವಿಸ್ತರಿಸಿದ ಸುಪ್ರೀಂ ಕೋರ್ಟ್
ಸಂಸ್ಥೆಯಿಂದ ಪ್ರಕರಣಗಳಿಗೆ ಸಂಬಂಧಿಸಿದ ಅನುಸೂಚಿತವಲ್ಲದ ಅಪರಾಧಗಳ ತನಿಖೆಗೆ ಅಸ್ತು
PC : PTI
ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ಅಧಿಕಾರವು ಎನ್ಐಎ ಕಾಯ್ದೆಯ ಅನುಸೂಚಿಯಲ್ಲಿ ಉಲ್ಲೇಖಿಸಲಾದ ಅಥವಾ ಪಟ್ಟಿ ಮಾಡಲಾಗಿರುವ ಅಪರಾಧಗಳು ಅಥವಾ ಇಂತಹ ‘ಅನುಸೂಚಿತ ಅಪರಾಧಗಳನ್ನು’ ಮಾಡುವ ಆರೋಪಿಗಳ ತನಿಖೆಗೆ ಮಾತ್ರ ಸೀಮಿತಗೊಂಡಿಲ್ಲ. ಆರೋಪಿಯು ಅನುಸೂಚಿತ ಅಪರಾಧಕ್ಕೆ ಸಂಬಂಧಿಸಿದ ಇತರ ಯಾವುದೇ ಅಪರಾಧವನ್ನು ಮಾಡಿದ್ದರೆ ಅದನ್ನೂ ತನಿಖೆ ನಡೆಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ, ತನ್ಮೂಲಕ ಎನ್ಐಎ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿದೆ.
ಎನ್ಐಎ ಕಾಯ್ದೆಯ ಕಲಂ 8ನ್ನು ವ್ಯಾಖ್ಯಾನಿಸಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು,ಅನುಸೂಚಿತ ಅಪರಾಧಗಳನ್ನು ತನಿಖೆ ಮಾಡುವಾಗ ಆರೋಪಿಯು ಪಟ್ಟಿ ಮಾಡಲಾಗಿರುವ ಅಪರಾಧಕ್ಕೆ ಸಂಬಂಧಿಸಿದ ಇತರ ಯಾವುದೇ ಅಪರಾಧವನ್ನು ಎಸಗಿದ್ದರೆ ಎನ್ಐಎ ಅದನ್ನೂ ತನಿಖೆಗೊಳಪಡಿಸಬಹುದು ಎಂದು ಹೇಳಿತು.
ಸರ್ವೋಚ್ಚ ನ್ಯಾಯಾಲಯದ ಸೋಮವಾರದ ತೀರ್ಪು ಕಾಯ್ದೆಯ ನಿಬಂಧನೆಯಲ್ಲಿ ‘ಇತರ ಯಾವುದೇ ಅಪರಾಧವು’ ವ್ಯಾಪಕ ಮತ್ತು ವಿಸ್ತಾರವಾದ ಸ್ವರೂಪವನ್ನು ಹೊಂದಿದೆ ಮತ್ತು ಎನ್ಐಎ ಅನುಸೂಚಿಯಲ್ಲಿ ಅಪರಾಧವಾಗಿರಬಹುದು ಅಥವಾ ಇಲ್ಲದಿರಬಹುದು, ಆದಾಗ್ಯೂ ಎನ್ಐಎ ಕಾಯ್ದೆಯಡಿ ಅನುಸೂಚಿತ ಅಪರಾಧದೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನದಿಂದ 100 ಕೋಟಿ ರೂ.ಮೌಲ್ಯದ ಹೆರಾಯಿನ್ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸುತ್ತಿರುವ ಅಂಕುಶ ವಿಪನ್ ಕಪೂರ್ಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಿರುವ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಮಾದಕ ದ್ರವ್ಯಗಳ ಕಾಯ್ದೆ(ಎನ್ಸಿಪಿಎಸ್)ಯಡಿ ದಾಖಲಾಗಿದ್ದ ಎಫ್ಐಆರ್ಗಳ ತನಿಖೆಯನ್ನು ಎನ್ಐಎಗೆ ಒಪ್ಪಿಸಿದ್ದ ಕೇಂದ್ರ ಸರಕಾರದ ಕ್ರಮವನ್ನು ಕಪೂರ್ ಪ್ರಶ್ನಿಸಿದ್ದ. ಎನ್ಐಎ ಕಾಯ್ದೆಯ ಅನುಸೂಚಿಯಲ್ಲಿ ಎನ್ಡಿಪಿಸ್ ಅಪರಾಧಗಳನ್ನು ಉಲ್ಲೇಖಿಸಲಾಗಿಲ್ಲ.