'ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದಾಳಿಗಳು' - ಕೋರ್ಟ್ ಹಸ್ತಕ್ಷೇಪಕ್ಕೆ ಆಗ್ರಹಿಸಿ ಪಿಐಎಲ್: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
ಹೊಸದಿಲ್ಲಿ: ಮುಸ್ಲಿಮರ ಮೇಲಿನ ಥಳಿತ ಮತ್ತು ಗುಂಪು ಹಿಂಸೆ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಾಗುತ್ತಿರುವುದರಿಂದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕೆಂದು ಕೋರಿ ನ್ಯಾಷನಲ್ ಫೆಡರೇಷನ್ ಆಪ್ ಇಂಡಿಯನ್ ವಿಮೆನ್ ಸಲ್ಲಿಸಿದ ಪಿಐಎಲ್ ಅನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಇಂದು ಒಪ್ಪಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಜೆ ಬಿ ಪರ್ದಿವಾಲ ಅವರ ಪೀಠವು ಈ ಪಿಐಎಲ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಹರ್ಯಾಣ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಮಧ್ಯ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಾಲಯವು ಅರ್ಜಿದಾರರಿಗೆ ಆಯಾಯ ಹೈಕೋರ್ಟಿನ ಕದ ತಟ್ಟಲು ಹೇಳಿದರೆ ಏನೂ ನಡೆಯದು ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕದು ಎಂದು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಹೇಳಿದರಲ್ಲದೆ ತೆಹ್ಸೀನ್ ಪೂನಾವಾಲ ತೀರ್ಪಿನ ನಂತರವೂ ಇಂತಹ ಘಟನೆಗಳು ನಡೆಯುತ್ತಲೇ ಇದೆ. ನಾವೆಲ್ಲಿಗೆ ಹೋಗುವುದು? ಇದು ಗಂಭೀರ ವಿಚಾರ,” ಎಂದು ಅವರು ಹೇಳಿದರು.
2018ರಲ್ಲಿ ನೀಡಿದ್ದ ತೀರ್ಪಿನಲ್ಲಿ ಗುಂಪು ಥಳಿತ ಮತ್ತು ಹಿಂಸೆ ಪ್ರಕರಣಗಳನ್ನು ಹತ್ತಿಕ್ಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ವಿಸ್ತೃತ ಮಾರ್ಗಸೂಚಿಗಳನ್ನು ನೀಡಿತ್ತು.
ಫೆಡರೇಷನ್ ಅರ್ಜಿಯಲ್ಲಿ ಬಿಹಾರದ ಸರಣ್ ಜಿಲ್ಲೆಯಲ್ಲಿ ಈ ವರ್ಷದ ಜೂನ್ 28 ರಂದು ನಡೆದ ಟ್ರಕ್ ಚಾಲಕ ಜಹಾರುದ್ದೀನ್ ಹತ್ಯೆ, ಜೂನ್ 17ರಂದು ಒಡಿಶಾದ ಭುಬನೇಶ್ವರದಲ್ಲಿ ಸಂಘಪರಿವಾರ ಗುಂಪೊಂದು ಇಬ್ಬರು ಮುಸ್ಲಿಂ ಯುವಕರ ಮೇಲೆ ನಡೆಸಿದ ಮಾರಣಾಂತಿಕ ದಾಳಿ ಹಾಗೂ ಅವರಿಗೆ ಜೈ ಶ್ರೀ ರಾಮ್ ಹೇಳಲು ಬಲವಂತಪಡಿಸಿದ ಘಟನೆ ಮತ್ತು ರಾಜಸ್ಥಾನದ ಕೋಟಾದಲ್ಲಿ ಈ ವರ್ಷದ ಮೇ 26ರಂದು ಹಜ್ ಯಾತ್ರಾರ್ಥಿಗಳಿದ್ದ ಬಸ್ ಒಂದರ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿ ಇಂತಹ ಘಟನೆಗಳು ಮರುಕಳಿಸದೇ ಇರಲು ಸುಪ್ರೀಂ ಕೋರ್ಟ್ ಹಸ್ತಕ್ಷೇಪಕ್ಕೆ ಕೋರಲಾಗಿದೆ.