ನಾವು ಹೃದಯ ಬಡಿತವನ್ನು ನಿಲ್ಲಿಸುವ ಹಾಗಿಲ್ಲ: ಮಹಿಳೆಯ 26 ವಾರ ಪ್ರಾಯದ ಗರ್ಭ ತೆಗೆಯಲು ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ತನ್ನ 26 ವಾರದ ಗರ್ಭವನ್ನು ತೆಗೆದುಹಾಕಲು ಅನುಮತಿ ಕೋರಿ ವಿವಾಹಿತ ಮಹಿಳೆಯೊಬ್ಬರು ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕಿರಿಸಿದೆ. ಮಹಿಳೆಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಯಾವ ದೋಷವೂ ಇಲ್ಲ ಎಂದು ಏಮ್ಸ್ ತಜ್ಞ ವೈದ್ಯರ ವರದಿಯನ್ನಾಧರಿಸಿ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಿದೆ.
“ಅರ್ಜಿದಾರೆ ಗರ್ಭ ಧರಿಸಿ 26 ವಾರಗಳು ಮತ್ತು 5 ದಿನಗಳಾಗಿವೆ. ತಾಯಿ ಮತ್ತು ಗರ್ಭದಲ್ಲಿರುವ ಭ್ರೂಣಕ್ಕೆ ಯಾವುದೇ ಅಪಾಯವಿಲ್ಲದೇ ಇರುವುದರಿಂದ ಈ ಹಂತದಲ್ಲಿ ಗರ್ಭವನ್ನು ತೆಗೆಯಲು ಅನುಮತಿ ನೀಡುವುದು ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಕಾಯಿದೆಯ ಸೆಕ್ಷನ್ 3 ಮತ್ತು 5ರ ಉಲ್ಲಂಘನೆಯಾಗುತ್ತದೆ,” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.
“ನಾವು ಹೃದಯ ಬಡಿತವನ್ನು ನಿಲ್ಲಿಸುವ ಹಾಗಿಲ್ಲ,” ಎಂದು ಅವರು ಹೇಳಿದರು.
ಅರ್ಜಿದಾರೆ ಈಗಾಗಲೇ ಎರಡು ಮಕ್ಕಳ ತಾಯಿಯಾಗಿದ್ದಾರೆ. ತಾನು ಖಿನ್ನತೆಯಿಂದ ಬಳಲುತ್ತಿದ್ದು ಮೂರನೇ ಮಗುವಿನ ಆರೈಕೆ ತನ್ನಿಂದ ಭಾವಾತ್ಮಕವಾಗಿ ಹಾಗೂ ಆರ್ಥಿಕವಾಗಿ ಸಾಧ್ಯವಿಲ್ಲ,” ಎಂದು ಹೇಳಿದ್ದರು.