ಧಾರ್ಮಿಕ ಸ್ಥಳಗಳ ರಕ್ಷಣೆಗೆ ಕೈಗೊಂಡ ಕ್ರಮಗಳನ್ನು ನ್ಯಾಯಾಲಯ ನೇಮಿಸಿದ ಸಮಿತಿಗೆ ತಿಳಿಸಲು ಮಣಿಪುರಕ್ಕೆ ಸುಪ್ರೀಂ ನಿರ್ದೇಶನ
ಹೊಸದಿಲ್ಲಿ: ರಾಜ್ಯದಲ್ಲಿಯ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ನ್ಯಾಯಾಲಯದಿಂದ ನೇಮಕಗೊಂಡಿರುವ ಸಮಿತಿಗೆ ಮಾಹಿತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮಣಿಪುರ ಸರಕಾರಕ್ಕೆ ನಿರ್ದೇಶನ ನೀಡಿದೆ.
ಜನಾಂಗೀಯ ಸಂಘರ್ಷದಿಂದ ಪೀಡಿತ ಮಣಿಪುರದಲ್ಲಿ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಮೇಲ್ವಿಚಾರಣೆಗಾಗಿ ಕಳೆದ ಆಗಸ್ಟ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ನ್ಯಾ.ಗೀತಾ ಮಿತ್ತಲ್ ನೇತೃತ್ವದಲ್ಲಿ ಮೂವರು ಮಾಜಿ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯನ್ನು ರಚಿಸಿತ್ತು.
ಶುಕ್ರವಾರ ನ್ಯಾಯಾಲಯವು ಮೈತೈ ಕ್ರಿಶ್ಚಿಯನ್ ಚರ್ಚ್‌ಗಳ ಮಂಡಳಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ನ್ಯಾಯಾಲಯವು ನೇಮಕಗೊಳಿಸಿರುವ ಸಮಿತಿಯು ಧಾರ್ಮಿಕ ಸ್ಥಳಗಳ ಮರುಸ್ಥಾಪನೆಗೆ ಕೆಲವು ಶಿಫಾರಸುಗಳನ್ನು ಮಾಡಿದೆ ಎಂದು ಹೇಳಿದ ಮಂಡಳಿಯ ಪರ ವಕೀಲ ಹುಝೆಫಾ ಅಹ್ಮದಿ ಅವರು,ಎಲ್ಲ ಸಮುದಾಯಗಳ ಧಾರ್ಮಿಕ ಸ್ಥಳಗಳ ಮರುಸ್ಥಾಪನೆಯನ್ನು ಮಂಡಳಿಯು ಬಯಸಿದೆ ಎಂದು ತಿಳಿಸಿದರು.
ಪರಿಹಾರ ಶಿಬಿರಗಳಲ್ಲಿ ವಾಸವಾಗಿರುವವರು ಕ್ರಿಸ್‌ಮಸ್ ಹಬ್ಬವನ್ನು ಆಚರಿಸುವಂತಾಗಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರ ಭರವಸೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿತು.
ಧಾರ್ಮಿಕ ಸ್ಥಳಗಳನ್ನು ಅತಿಕ್ರಮಣ ಮತ್ತು ಹಾನಿ ಅಥವಾ ವಿನಾಶದಿಂದ ರಕ್ಷಿಸಬೇಕು ಎಂದು ಕಳೆದ ಸೆಪ್ಟಂಬರ್‌ನಲ್ಲಿ ಹೇಳಿದ್ದ ನ್ಯಾಯಾಲಯದಿಂದ ನೇಮಕಗೊಂಡ ಸಮಿತಿಯು,ಸ್ಥಳಾಂತರಗೊಂಡಿರುವ ವ್ಯಕ್ತಿಗಳ ಆಸ್ತಿಗಳನ್ನು ಹಾಗೂ ಹಾನಿಗೀಡಾದ/ಸುಟ್ಟು ಹೋದ ಆಸ್ತಿಗಳ ರಕ್ಷಣೆಯನ್ನು ಖಚಿತಪಡಿಸುವಂತೆ ಮತ್ತು ಅವುಗಳ ಅತಿಕ್ರಮಣವನ್ನು ತಡೆಯುವಂತೆ ಮಣಿಪುರ ಸರಕಾರಕ್ಕೆ ಕರೆನೀಡಿತ್ತು