ಭಾರತ್ ಮಾಲಾ, ಆಯುಷ್ಮಾನ್ ಭಾರತ್ ಯೋಜನೆಗಳಲ್ಲಿ ಹಗರಣ: ಸಿಎಜಿ ವರದಿ ಕುರಿತು ಪ್ರಧಾನಿ ಮೋದಿಯ ಮೌನ ಪ್ರಶ್ನಿಸಿದ ಕಾಂಗ್ರೆಸ್
ಸುಪ್ರಿಯಾ ಶ್ರೀನಾಟೆ | Photo: PTI
ಹೊಸದಿಲ್ಲಿ: ಭಾರತೀಯ ಜನತಾಪಕ್ಷದ ಆಳ್ವಿಕೆಯಲ್ಲಿ ಹಲವಾರು ಅಕ್ರಮಗಳು ನಡೆದಿವೆಯೆಂಬ ಭಾರತೀಯ ಮಹಾ ನಿಯಂತ್ರಕರು ಹಾಗೂ ಲೇಖಪಾಲರ (ಸಿಎಜಿ) ವರದಿಯ ಬಗ್ಗೆ ಗುರುವಾರ ಬೆಟ್ಟು ಮಾಡಿರುವ ಕಾಂಗ್ರೆಸ್ ಪಕ್ಷವು ಈ ಹಗರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿದೆ.
ನೂರಾರು ಕೋಟಿ ರೂ. ಮೊತ್ತದ 7 ಹಗರಣಗಳಲ್ಲಿ ಮೋದಿ ಸರಕಾರವು ಶಾಮೀಲಾಗಿದೆಯೆಂದು ಪ್ರತಿಪಕ್ಷವು ಆಪಾದಿಸಿದೆ. ಭಾರತ್ಮಾಲಾ ಯೋಜನೆ, ದ್ವಾರಕಾ ಎಕ್ಸ್ಪ್ರೆಸ್ವೇ ನಿರ್ಮಾಣ ಕಾಮಗಾರಿ, ಆಯುಷ್ಮಾನ್ ಭಾರತ ಯೋಜನೆಗಳಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಭಾರತೀಯ ಮಹಾ ನಿಯಂತ್ರಕರು ಹಾಗೂ ಲೇಖಪಾಲರು ತಮ್ಮ ವರದಿಗಳಲ್ಲಿ ಗಮನಸೆಳೆದಿದ್ದಾರೆ. ಆಯೋಧ್ಯಾ ಅಭಿವೃದ್ಧಿ ಯೋಜನೆಯಲ್ಲಿ ಗುತ್ತಿಗೆದಾರರು ಮಿತಿ ಮೀರಿ ಲಾಭಗಳಿಸಿರುವುದನ್ನು ಸಿಎಜಿ ವರದಿ ಪತ್ತೆಹಚ್ಚಿದೆ.
‘‘ನಿಮ್ಮ ಮೂಗಿನ ನೇರಕ್ಕೆ ಸಿಎಜಿ ಹಗರಣಗಳನ್ನು ಬಯಲಿಗೆಳೆದ ನಂತರವಾದರೂ ನೀವು ಮೌನ ಮುರಿಯುವರಾ? ‘‘ನೀವು ಸಿಸಿಇಎನ ಸಂಪುಟ ವ್ಯವಹಾರ ಚೇರ್ಮನ್ ಆಗಿದ್ದೀರಿ. ನಿರ್ಮಾಣ ವೆಚ್ಚವು ಪ್ರತಿ ಕಿ.ಮೀ.ಗೆ 15.37 ಕೋಟಿ ರೂ.ಗಳಿಂದ 32 ಕಿ.ಮೀ.ಗೆ ದ್ವಿಗುಣಗೊಂಡ ಭಾರತ ಮಾಲಾ ಯೋಜನೆಗೆ ಸಂಬಂಧಿಸಿ ಇನ್ನಾದರೂ ನಿಮ್ಮ ಬಾಯಿ ತೆರೆಯವಿರಾ? ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಪ್ರಶ್ನಿಸಿದ್ದಾರೆ.
ಕೇಂದ್ರ ಸರಕಾರದ ಪ್ರಮುಖ ರಸ್ತೆ ಅಭಿವೃದ್ಧಿ ಕಾರ್ಯಕ್ರಮವಾದ ಭಾರತಮಾಲಾ ಯೋಜನೆಯ ಟೆಂಡರ್ ಪ್ರಕ್ರಿಯೆ ಕೂಡಾ ಲೋಪಭರಿತವಾಗಿದೆ ಎಂದು ಅವರು ಆಪಾದಿಸಿದ್ದಾರೆ.
ಭಾರತ್ ಮಾಲಾ ಯೋಜನೆಗೆ ಸಂಬಂದಿಸಿ ವಿಸ್ತೃತವಾದ ಪ್ರಾಜೆಕ್ಟ್ ವರದಿ ಇನ್ನೂ ಸಲ್ಲಿಕೆಯಾಗಿಲ್ಲ. 3500 ಕೋಟಿ ರೂ. ಮೊತ್ತದ ಹಣವನ್ನು ಎಸ್ಕ್ರೋ ಖಾತೆಯಿಂದ ( ಇತರ ವ್ಯಕ್ತಿಯ ಅಥವಾ ಸಂಸ್ಥೆಯ ಬಳಿ ಇರಿಸಲಾಗುವ ಹಣ.ನಿರ್ದಿಷ್ಟ ಒಪ್ಪಂದ ಈಡೇರಿದ ಬಳಿಕವಷ್ಟೇ ಆ ಹಣವನ್ನು ಪಾವತಿಸಬೇಕಾದ ವ್ಯಕ್ತಿಗೆ ನೀಡಲಾಗುತ್ತದೆ) ವರ್ಗಾಯಿಸಲಾಗಿದೆ. ಇದಕ್ಕೂ ಹೆಚ್ಚಾಗಿ ಸುರಕ್ಷತಾ ಸಮಾಲೋಚಕರನ್ನು ನೇಮಿಸಲಾಗದೆ ಇರುವ ಬಗ್ಗೆಯೂ ಸಂಸ್ಥೆಯು ಬೆಟ್ಟು ಮಾಡಿ ತೋರಿಸಿದೆ.
ದಿಲ್ಲಿ-ಗುರುಗ್ರಾಮ ಗಡಿಯಲ್ಲಿರುವ ದ್ವಾರಕಾ ಎಕ್ಸ್ಪ್ರೆಸ್ವೇ ಯೋಜನೆಯಲ್ಲಿ ಅಕ್ರಮಗಳು ನಡೆದಿರುವುದಾಗಿಯೂ ಕಾಂಗ್ರೆಸ್ ವಕ್ತಾರೆ ಆಪಾದಿಸಿದ್ದಾರೆ. ಮೂಲತಃ ಈ ಯೋಜನೆಗೆ ಅನುಮೋದಿಸಲ್ಪಟ್ಟ ಮೊತ್ತವು ಪ್ರತಿ ಕಿ.ಮೀ.ಗೆ 18.2 ಕೋಟಿ ರೂ.ನಿಂದ 251 ಕೋಟಿ ರೂ.ಗೆ ಏರಿಸಲಾಗಿದೆ. ಎಕ್ಸ್ಪ್ರೆಸ್ವೇನ ಹರ್ಯಾಣ ಭಾಗದಲ್ಲಿ 2 ಕಿ.ಮೀ.ನಷ್ಟು ಎತ್ತರಿಸಲಾದ ಕ್ಯಾರೇಜ್ವೇಯನ್ನು ಈ ಕಾಮಗಾರಿಯಲ್ಲಿ ಒಳಪಡಿಸುವುದಾಗಿ ಹೇಳಿಕೊಂಡು ಈ ಮೊತ್ತವನ್ನು ಏರಿಕೆ ಮಾಡಲಾಗಿದೆ ಎಂದು ಸುಪ್ರಿಯಾ ಶ್ರೀನಾಟೆ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಒಂದು ನಿರ್ಧಾರವು ಎಕ್ಸ್ಪ್ರೆಸ್ವೇನ ಸಿವಿಲ್ ಕಾಮಗಾರಿ ವೆಚ್ಚವನ್ನು 14 ಪಟ್ಟು ಅಧಿಕಗೊಳಿಸಿದೆ ಎಂದವರು ಆಪಾದಿಸಿದರು. ಈ ವೆಚ್ಚದಲ್ಲಿ ಮಂಗಳಯಾನವನ್ನೇ ನಡೆಸಬಹುದಾಗಿದೆ ಎಂದು ಸುಪ್ರಿಯಾ ವ್ಯಂಗ್ಯವಾಡಿದರು.