ನಿಫಾ ವೈರಸ್: ಕೋಝಿಕ್ಕೋಡ್ ನಲ್ಲಿ ಸೆ. 24ರವರೆಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ
Photo: PTI
ಕೋಝಿಕ್ಕೋಡ್: ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಸೋಂಕಿನಿಂದ, ಇಬ್ಬರು ಮೃತಪಟ್ಟು, ನಾಲ್ವರು ಸೋಂಕಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಒಂದು ವಾರ ಜಿಲ್ಲೆಯಲ್ಲಿನ ಎಲ್ಲ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಬಂದ್ ಆಗಲಿವೆ. ಸೆಪ್ಟೆಂಬರ್ 24ರವರೆಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳನ್ನು ನಡೆಸಲು ಎಲ್ಲ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ ಎಂದು ಶುಕ್ರವಾರ ಕೋಝಿಕ್ಕೋಡ್ ಜಿಲ್ಲಾಧಿಕಾರಿ ಎ.ಗೀತಾ ತಿಳಿಸಿದ್ದಾರೆ. ಇದಕ್ಕೂ ಮುನ್ನ ಗುರುವಾರ, ಶುಕ್ರವಾರ ಹಾಗೂ ಶನಿವಾರದಂದು ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಜಿಲ್ಲಾಡಳಿತವು ರಜೆ ಘೋಷಿಸಿತ್ತು ಎಂದು thenewsminute.com ವರದಿ ಮಾಡಿದೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಗೀತಾ, “ಈವರೆಗೆ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರ ಸಂಖ್ಯೆ 1,080ಕ್ಕೆ ಏರಿಕೆಯಾಗಿದ್ದು, ಈ ಪೈಕಿ 297 ಮಂದಿಯನ್ನು ಭಾರಿ ಅಪಾಯದಲ್ಲಿರುವ ಸಂಪರ್ಕ ವರ್ಗದಲ್ಲಿ ಗುರುತಿಸಲಾಗಿದೆ. ಶುಕ್ರವಾರ ಒಂದೇ ದಿನ 130ಕ್ಕೂ ಹೆಚ್ಚು ಮಂದಿಯನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಡಿ ಬರುವ ಹಲವಾರು ವಾರ್ಡ್ ಗಳನ್ನು ನಿರ್ಬಂಧಿತ ವಲಯವೆಂದು ಘೋಷಿಸಲಾಗಿದೆ. ನಾವೀಗ ಭಾರಿ ಎಚ್ಚರಿಕೆಯಿಂದ ಇರಬೇಕಾದ ಸಮಯವನ್ನು ಹಾದು ಹೋಗುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು, ಎಷ್ಟು ಸಾಧ್ಯವೊ ಅಷ್ಟು ರೋಗ ಪ್ರಸರಣದ ಪರಿಸ್ಥಿತಿಯನ್ನು ತಪ್ಪಿಸುವ ಮೂಲಕ ನಾವು ಪ್ರತಿಯೊಬ್ಬರ ಸುರಕ್ಷತೆಯನ್ನು ಖಾತ್ರಿಗೊಳಿಸಬೇಕಿದೆ. ಇದೇ ವೇಳೆ, ನಿಮ್ಮ ಶಿಕ್ಷಣಕ್ಕೆ ಯಾವುದೇ ತಡೆಯುಂಟಾಗಬಾರದು. ಹೀಗಾಗಿಯೇ ನಾವು ಶೈಕ್ಷಣಿಕ ವಲಯದಲ್ಲಿನ ಹಲವಾರು ಮಂದಿಯೊಂದಿಗೆ ವ್ಯಾಪಕ ಚರ್ಚೆ ನಡೆಸಿ, ಮುಂದಿನ ವಾರದಿಂದ ಆನ್ ಲೈನ್ ತರಗತಿಗಳನ್ನು ಜಾರಿಗೊಳಿಸಲು ನಿರ್ಧರಿಸಿದ್ದೇವೆ” ಎಂದು ಜಿಲ್ಲಾಧಿಕಾರಿ ಗೀತಾ ಹೇಳಿದ್ದು, ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಆನ್ ಲೈನ್ ತರಗತಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ, ಜಿಲ್ಲಾಡಳಿತವು ಕೋಝಿಕ್ಕೋಡ್ ನಲ್ಲಿ ಸಾರ್ವಜನಿಕ ಸಭೆಗಳು ಅಥವಾ ಕಾರ್ಯಕ್ರಮಗಳಿಗೆ ನಿಷೇಧವನ್ನು ಹೇರುವ ಮೂಲಕ ಸಾರ್ವಜನಿಕ ನಿರ್ಬಂಧಗಳನ್ನು ಜಾರಿಗೊಳಿಸಿದೆ.