Fact Check | ಬಸ್ ನಲ್ಲಿ ಯುವತಿಗೆ ಕಿರುಕುಳ ನೀಡುತ್ತಿರುವ ʼಸ್ಕ್ರಿಪ್ಟೆಡ್ʼ ವಿಡಿಯೋ ವೈರಲ್ !
Photo: boomlive.in
ಹೊಸದಿಲ್ಲಿ: ದಿಲ್ಲಿಯ ಬಸ್ಸೊಂದರಲ್ಲಿ ಯುವಕರ ಗುಂಪೊಂದು ಯುವತಿಗೆ ಕಿರುಕುಳ ನೀಡುತ್ತಿರುವುದನ್ನು ತೋರಿಸುತ್ತಿರುವ ಕಲ್ಪಿತ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದೊಂದು ನೈಜ ಘಟನೆ ಎಂದು ಅದು ಹೇಳಿಕೊಂಡಿದೆ.
ಕಂಟೆಂಟ್ ಕ್ರಿಯೇಟರ್ ಈ ವೀಡಿಯೊವನ್ನು ಮಾಡಿದ್ದು,ಅದು ನೈಜ ಘಟನೆಯನ್ನು ತೋರಿಸುತ್ತಿಲ್ಲ ಎಂದು ಸತ್ಯಶೋಧಕ ಜಾಲತಾಣ ಬೂಮ್ ಫ್ಯಾಕ್ಟ್ ಚೆಕ್ ಬಹಿರಂಗಗೊಳಿಸಿದೆ.
ಬಸ್ಸೊಂದರಲ್ಲಿ ಯುವಕರ ಗುಂಪೊಂದು ಯುವತಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಯಾಣಿಕನೋರ್ವ ಚಿತ್ರೀಕರಿಸುತ್ತಿದ್ದನ್ನು ವೀಡಿಯೊ ತೋರಿಸಿದೆ. ಕೆಲ ನಿಮಿಷಗಳ ಬಳಿಕ ಕಿಡಿಗೇಡಿಗಳು ಕಿರುಕುಳದ ವಿರುದ್ಧ ಧ್ವನಿಯೆತ್ತಿದ್ದ ವ್ಯಕ್ತಿಗೆ ಬೆದರಿಕೆಯನ್ನು ಒಡ್ಡಿದ್ದರು.
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ನೈಜ ಘಟನೆಯೆಂದು ನಂಬಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದರು.
ಓರ್ವ ಎಕ್ಸ್ ಬಳಕೆದಾರ ‘ದಿಲ್ಲಿಯಲ್ಲಿನ ಈ ರಾಕ್ಷಸರನ್ನು ತ್ವರಿತವಾಗಿ ಪತ್ತೆ ಹಚ್ಚಿ’ ಎಂಬ ಅಡಿಬರಹದೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದ.
ವಾಸ್ತವವೇನು?
ʼಬೂಮ್ʼ ಈ ವಿಷಯವನ್ನು ಕೈಗೆತ್ತಿಕೊಂಡಾಗ 20 ಲಕ್ಷಕ್ಕೂ ಅಧಿಕ ಜನರು ಅದಾಗಲೇ ವೀಡಿಯೊವನ್ನು ವೀಕ್ಷಿಸಿದ್ದರು.
ವೀಡಿಯೊ ಕೀಫ್ರೇಮ್ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ ಬೂಮ್ 2023, ಫೆ.23ರಂದು ಅಮನ್ ಬೇನಿವಾಲ್ ಎಂಬ ಹೆಸರಿನಲ್ಲಿಯ ಯೂ ಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾಗಿದ್ದ ಮೂಲ ವೀಡಿಯೊವನ್ನು ಪತ್ತೆ ಹಚ್ಚಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವೀಡಿಯೊಕ್ಕಿಂತ ದೀರ್ಘವಾಗಿದೆ. ವೀಡಿಯೊದಲ್ಲಿ ಹಕ್ಕು ನಿರಾಕರಣೆಯನ್ನು ಸ್ಪಷ್ಟವಾಗಿ ತೋರಿಸಲಾಗಿದ್ದು,ಕೇವಲ ಮನೋರಂಜನೆ ಉದ್ದೇಶದಿಂದ ಈ ವೀಡಿಯೊವನ್ನು ಸೃಷ್ಟಿಸಲಾಗಿದೆ ಎಂದು ಹೇಳಲಾಗಿದೆ.
ಈ ಚಾನೆಲ್ ಹಲವಾರು ಪ್ರಾಂಕ್ ವೀಡಿಯೊಗಳನ್ನೂ ಒಳಗೊಂಡಿದೆ.
ಹೀಗಾಗಿ ಕಿಡಿಗೇಡಿಗಳು ಮೂಲ ವಿಡಿಯೊವನ್ನು ಎಡಿಟ್ ಮಾಡಿ,ಕಿರುಕುಳದ ನೈಜ ಘಟನೆಯೆಂಬಂತೆ ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು ಸ್ಪಷ್ಟವಾಗಿದೆ.
ಈ ಲೇಖನವನ್ನು ಮೊದಲು boomlive.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.