ಎಸ್ಸಿ/ಎಸ್ಟಿ ಮೀಸಲಾತಿ: ಕೆನೆಪದರ ಕುರಿತು ಸುಪ್ರೀಂ ಕೋರ್ಟ್ ಸಲಹೆ ತಳ್ಳಿಹಾಕಿದ ಕೇಂದ್ರ ಸರಕಾರ
ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಸಂವಿಧಾನವು ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಿಗೆ ಮೀಸಲಾತಿಯಲ್ಲಿ ಕೆನೆಪದರ ತತ್ವಕ್ಕೆ ಅವಕಾಶವನ್ನು ಒದಗಿಸಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೈಷ್ಣವ್, ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದ ಪ್ರಕಾರ ಈ ಎರಡು ಸಮುದಾಯಗಳಿಗೆ ಕೋಟಾಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಕೆನೆಪದರ ತತ್ವವನ್ನು ಎಸ್ಸಿ ಮತ್ತು ಎಸ್ಟಿ ಮೀಸಲಾತಿಗೆ ವಿಸ್ತರಿಸಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಸಲಹೆಯನ್ನು ಸರಕಾರವು ಒಪ್ಪಿಕೊಳ್ಳುವುದಿಲ್ಲ ಎನ್ನುವುದನ್ನು ವೈಷ್ಣವ ಅವರ ಹೇಳಿಕೆಗಳು ಸೂಚಿಸುತ್ತವೆ. ಮೀಸಲಾತಿ ಲಾಭಗಳಿಂದ ಒಂದು ಸಮುದಾಯದ ಶ್ರೀಮಂತ ಮತ್ತು ಮುಂದುವರಿದ ಸದಸ್ಯರನ್ನು ಹೊರಗಿರಿಸುವುದು ಕೆನೆಪದರ ತತ್ವದ ಉದ್ದೇಶವಾಗಿದೆ.
ಆ.1ರಂದು ಪರಿಶಿಷ್ಟ ಜಾತಿಗಳು ಏಕರೂಪದ ಗುಂಪು ಆಗಿದ್ದು,ಅದನ್ನು ವರ್ಗಗಳಾಗಿ ವಿಂಗಡಿಸಲು ಸಾಧ್ಯವಿಲ್ಲ ಎಂದು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯದ 2004ರ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು 6:1 ಬಹುಮತದಿಂದ ತಳ್ಳಿಹಾಕಿತ್ತು.
ಈ ಪೈಕಿ ನಾಲ್ವರು ನ್ಯಾಯಾಧೀಶರು ಎಸ್ಸಿ/ಎಸ್ಟಿಗಳ ನಡುವೆ ‘ಕೆನೆಪದರ’ವನ್ನು ಗುರುತಿಸಬೇಕು ಮತ್ತು ಅವರನ್ನು ಮೀಸಲಾತಿ ಮ್ಯಾಟ್ರಿಕ್ಸ್ನಿಂದ ತೆಗೆದುಹಾಕಬೇಕು ಎಂದು ಹೇಳಿದ್ದರು. ಆದರೆ ಕೆನೆಪದರದ ಅನ್ವಯವು ಸಂವಿಧಾನ ಪೀಠದ ಮುಂದಿದ್ದ ಪ್ರಶ್ನೆಗಳಲ್ಲಿ ಸೇರಿರಲಿಲ್ಲ,ಹೀಗಾಗಿ ಅದನ್ನು ಪಾಲಿಸಬೇಕೆಂಬ ಕಾನೂನು ಅನಿವಾರ್ಯತೆ ಸರಕಾರಕ್ಕಿಲ್ಲ.
ಎಸ್ಸಿ/ಎಸ್ಟಿಗಳಿಗೆ ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯವು ಕೆಲವು ಸಲಹೆಗಳನ್ನು ನೀಡಿದೆ. ಇಂದು ಸಂಪುಟವು ಈ ವಿಷಯದ ಕುರಿತು ವಿಸ್ತೃತ ಚರ್ಚೆ ನಡೆಸಿದೆ. ಎನ್ಡಿಎ ಸರಕಾರವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಬದ್ಧವಾಗಿದೆ ಎನ್ನುವುದು ಸಂಪುಟದ ನಿರ್ಧಾರವಾಗಿದೆ ಎಂದು ವೈಷ್ಣವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶುಕ್ರವಾರ ಬಿಜೆಪಿಯ ಎಸ್ಸಿ/ಎಸ್ಟಿ ಸಂಸದರ ನಿಯೋಗವೊಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿತ್ತು. ಸರಕಾರವು ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ ಮೋದಿ,ಸರಕಾರವು ಎಸ್ಸಿ/ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು ಎಂದು ನಿಯೋಗದಲ್ಲಿದ್ದ ಬುಲಂದಶಹರ ಸಂಸದ ಭೋಲಾ ಸಿಂಗ್ ಅವರನ್ನುಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.