ದ್ವಿತೀಯ ಟೆಸ್ಟ್ | ಆಸ್ಟ್ರೇಲಿಯದ ವಿರುದ್ಧ ನ್ಯೂಝಿಲ್ಯಾಂಡ್ ಪ್ರತಿ ಹೋರಾಟ
ಮ್ಯಾಟ್ ಹೆನ್ರಿಗೆ ಏಳು ವಿಕೆಟ್, ಲ್ಯಾಥಮ್ ಅರ್ಧಶತಕ
Photo: PTI
ಹ್ಯಾಮಿಲ್ಟನ್: ಆರಂಭಿಕ ಬ್ಯಾಟರ್ ಟಾಮ್ ಲ್ಯಾಥಮ್ ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಿರುಗೇಟು ನೀಡಿದೆ. 94 ರನ್ ಹಿನ್ನಡೆಯಿಂದ ಹೊರ ಬಂದಿರುವ ಕಿವೀಸ್ ಶನಿವಾರ 2ನೇ ದಿನದಾಟದಂತ್ಯಕ್ಕೆ 40 ರನ್ ಮುನ್ನಡೆಯಲ್ಲಿದೆ.
ಶ್ರೀಲಂಕಾ ವಿರುದ್ಧ ಒಂದು ವರ್ಷದ ಹಿಂದೆ ಅರ್ಧಶತಕ ಗಳಿಸಿದ್ದ ಲ್ಯಾಥಮ್ ಕಿವೀಸ್ ನ ಪರ 2ನೇ ಇನಿಂಗ್ಸ್ ನಲ್ಲಿ ಔಟಾಗದೆ 65 ರನ್(154 ಎಸೆತ, 7 ಬೌಂಡರಿ) ಗಳಿಸಿದ್ದಾರೆ. ಆರಂಭಿಕ ಬ್ಯಾಟರ್ ವಿಲ್ ಯಂಗ್(1) ಬೇಗನೆ ಔಟಾದಾಗ ಜೊತೆಯಾದ ಲ್ಯಾಥಮ್ ಹಾಗೂ ವಿಲಿಯಮ್ಸನ್ 2ನೇ ವಿಕೆಟ್ ಗೆ 105 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿಲಿಯಮ್ಸನ್(51 ರನ್, 107 ಎಸೆತ, 6 ಬೌಂಡರಿ) ಸ್ಟಾರ್ಕ್ ಬೌಲಿಂಗ್ನಲ್ಲಿ ಒಂದು ರನ್ ಗಳಿಸಿ ಅರ್ಧಶತಕ ತಲುಪಿದರು. ಅರ್ಧಶತಕ ಗಳಿಸಿದ ಬೆನ್ನಿಗೆ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.
ಪಿಚ್ ಬೌಲರ್ಗಳ ಸ್ನೇಹಿಯಾಗಿದ್ದು ಮೊದಲೆರಡು ದಿನದಾಟದಲ್ಲಿ 22 ವಿಕೆಟ್ ಗಳು ಪತನಗೊಂಡಿವೆ. ಲ್ಯಾಥಮ್ ಹಾಗೂ ವಿಲಿಯಮ್ಸನ್ ಶತಕದ ಜೊತೆಯಾಟ ನೀಡಿ ಕಿವೀಸ್ ತಂಡದ ನೈತಿಕ ಸ್ಥೈರ್ಯ ಹೆಚ್ಚಿಸಿದ್ದಾರೆ.
ದಿನದಾಟದಂತ್ಯಕ್ಕೆ ನ್ಯೂಝಿಲ್ಯಾಂಡ್ 2 ವಿಕೆಟ್ ಗಳ ನಷ್ಟಕ್ಕೆ 134 ರನ್ ಗಳಿಸಿದೆ. ರಚಿನ್ ರವೀಂದ್ರ(11 ರನ್) ಹಾಗೂ ಲ್ಯಾಥಮ್ ಕ್ರೀಸ್ ನಲ್ಲಿದ್ದಾರೆ.
ಇದಕ್ಕೂ ಮೊದಲು ಕಿವೀಸ್ ನ 162 ರನ್ಗೆ ಉತ್ತರವಾಗಿ ಆಸ್ಟ್ರೇಲಿಯ ತನ್ನ ಮೊದಲ ಇನಿಂಗ್ಸ್ ನಲ್ಲಿ 256 ರನ್ ಗಳಿಸಿ ಆಲೌಟಾಯಿತು. 4 ವಿಕೆಟ್ ಗಳ ನಷ್ಟಕ್ಕೆ 124 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಆಸೀಸ್ ಪರ ಲಾಬುಶೇನ್ 90 ರನ್(147 ಎಸೆತ, 12 ಬೌಂಡರಿ) ಗಳಿಸಿ ಗಮನ ಸೆಳೆದರು. ಮಿಚೆಲ್ ಸ್ಟಾರ್ಕ್ 28 , ಗ್ರೀನ್ 25 ಹಾಗೂ ಕಮಿನ್ಸ್ 23 ರನ್ ಕೊಡುಗೆ ನೀಡಿದ್ದಾರೆ.
ಬಲಗೈ ವೇಗದ ಬೌಲರ್ ಮ್ಯಾಟ್ ಹೆನ್ರಿ(7-67)ಆಸ್ಟ್ರೇಲಿಯದ ಬ್ಯಾಟರ್ಗಳನ್ನು ಕಾಡಿದರು. ಹೆನ್ರಿ ಸರಣಿಯಲ್ಲಿ ಈ ತನಕ 15 ವಿಕೆಟ್ ಗಳನ್ನು ಪಡೆದಿದ್ದಾರೆ. ಫಿಲಿಪ್ಸ್(1-14), ಟಿಮ್ ಸೌಥಿ(1-68) ಹಾಗೂ ಸೀಯರ್ಸ್(1-71)ತಲಾ ಒಂದು ವಿಕೆಟ್ ಪಡೆದರು.