ಭಾರತದ ಎಲ್ಲ ರಾಯಭಾರ ಕಚೇರಿಗಳು,ದೂತಾವಾಸಗಳ ಸಮಗ್ರ ಭದ್ರತಾ ಮೌಲ್ಯಮಾಪನಕ್ಕೆ ಸಂಸದೀಯ ಸಮಿತಿಯ ಶಿಫಾರಸು

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆತಿಥೇಯ ರಾಷ್ಟ್ರಗಳಲ್ಲಿನ ಭೌಗೋಳಿಕ ರಾಜಕೀಯ ಪರಿಸ್ಥಿತಿ,ಸಂಭಾವ್ಯ ಬೆದರಿಕೆಗಳು ಮತ್ತು ದೌರ್ಬಲ್ಯಗಳನ್ನು ಗಣನೆಗೆ ತೆಗೆದುಕೊಂಡು ಭಾರತದ ಎಲ್ಲ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳ ಸಮಗ್ರ ಭದ್ರತಾ ಮೌಲ್ಯಮಾಪನವನ್ನು ನಡೆಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಕುರಿತ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸಮಿತಿಯು ತನ್ನ ವರದಿಯಲ್ಲಿ ಭಾರತವು ಪ್ರಸ್ತುತ 42 ದೇಶಗಳಲ್ಲಿ ನಿವಾಸಿ ರಾಜತಾಂತ್ರಿಕ ಕಚೇರಿಗಳನ್ನು ಹೊಂದಿಲ್ಲ ಎನ್ನುವುದನ್ನೂ ಗಮನಿಸಿದೆ.
ಹೊಸ ರಾಯಭಾರ ಕಚೇರಿಗಳನ್ನು ಸ್ಥಾಪಿಸುವಲ್ಲಿ ಸವಾಲುಗಳನ್ನು ಸಮಿತಿಯು ಒಪ್ಪಿಕೊಂಡಿದ್ದರೂ,ವಿಶೇಷವಾಗಿ ಭಾರತವು ಆರ್ಥಿಕ ಅಥವಾ ವ್ಯೆಹಾತ್ಮಕ ಆಸಕ್ತಿಗಳನ್ನು ಹೊಂದಿರುವ ಅಥವಾ ಭಾರತೀಯ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ದೇಶಗಳಲ್ಲಿ ರಾಯಭಾರ ಕಚೇರಿಗಳ ಕೊರತೆಯನ್ನು ನೀಗಿಸಲು ಪ್ರಯತ್ನಗಳನ್ನು ಹೆಚ್ಚಿಸುವಂತೆ ಶಿಫಾರಸು ಮಾಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅನುದಾನಗಳ ಬೇಡಿಕೆ ಕುರಿತು ಸಮಿತಿಯ ನಾಲ್ಕನೇ ವರದಿ(2024-25)ಯನ್ನು ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಆರ್ಥಿಕ ಪಾಲುದಾರಿಕೆಗಳು,ವ್ಯೆಹಾತ್ಮಕ ಸಹಕಾರ,ಭಾರತೀಯ ಸಮುದಾಯದೊಂದಿಗೆ ತೊಡಗಿಸಿಕೊಳ್ಳುವಿಕೆ ಮತ್ತು ಬಹುಪಕ್ಷೀಯ ರಾಜತಾಂತ್ರಿಕತೆಯನ್ನು ಕೇಂದ್ರೀಕರಿಸಿ ಹೊಸ ರಾಯಭಾರ ಕಚೇರಿಗಳ ಸ್ಥಾಪನೆಗಾಗಿ ಮಾನದಂಡಗಳನ್ನೂ ತಾನು ಗಮನಕ್ಕೆ ತೆಗೆದುಕೊಂಡಿರುವುದಾಗಿ ಸಮಿತಿಯು ವರದಿಯಲ್ಲಿ ತಿಳಿಸಿದೆ.
ಫುಕುವೋಕಾ(ಜಪಾನ),ಕಝಾನ್(ರಷ್ಯಾ) ಮತ್ತು ಯೆಕಟರಿನ್ಬರ್ಗ್ (ರಷ್ಯಾ)ನಂತಹ ಇತರ ವೈಹಾತ್ಮಕ ಸ್ಥಳಗಳಲ್ಲಿ ದೂತಾವಾಸಗಳ ಕಾರ್ಯಾರಂಭಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳು ಹಾಗೂ ಯುರೋಪ್,ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಐದು ದೂತಾವಾಸಗಳನ್ನು ಆರಂಭಿಸಲು ಭವಿಷ್ಯದ ಯೋಜನೆಗಳ ಬಗ್ಗೆ ಸಮಿತಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಭೂರಾಜಕೀಯ ಪರಿಸ್ಥಿತಿ ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಭದ್ರತೆ ಸೇರಿದಂತೆ ಹಲವಾರು ಶಿಫಾರಸುಗಳನ್ನು ಸಮಿತಿಯು ಮಾಡಿದೆ.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಸುರಕ್ಷತೆ,ಸೂಕ್ಷ್ಮ ಮಾಹಿತಿಗಳ ರಕ್ಷಣೆ ಮತ್ತು ರಾಜತಾಂತ್ರಿಕ ಕಾರ್ಯಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಲ್ಲಿ ಭದ್ರತೆಯು ಅತ್ಯುನ್ನತ ಆದ್ಯತೆಯಾಗಿದೆ ಎನ್ನುವುದು ಸಮಿತಿಯ ಅಭಿಪ್ರಾಯವಾಗಿದೆ ಎಂದು ವರದಿಯು ತಿಳಿಸಿದೆ.
ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳ ಸುರಕ್ಷತೆ ಮತ್ತು ಭದ್ರತೆಯನ್ನು ನಿರಂತರವಾಗಿ ಪುನರ್ಪರಿಶೀಲಿಸಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಮಿತಿಗೆ ತಿಳಿಸಿದೆ.
ಭಾರತೀಯ ರಾಯಭಾರ ಕಚೇರಿಗಳ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳ ರಕ್ಷಣೆಗಾಗಿ ಸಾಕಷ್ಟು ಸಂಪನ್ಮೂಲಗಳನ್ನೂ ಹಂಚಿಕೆ ಮಾಡಬೇಕು ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.
ಬಾಂಗ್ಲಾದೇಶದಂತಹ ರಾಷ್ಟ್ರಗಳಲ್ಲಿ ಮತ್ತು ಪಶ್ಚಿಮ ಏಶ್ಯದ ಕೆಲವು ಭಾಗಗಳಲ್ಲಿಯ ಪರಿಸ್ಥಿತಿ ಹಾಗೂ ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ ಎಂದು ಭಾರತವು ಕೆಲವು ತಿಂಗಳುಗಳಿಂದ ವ್ಯಕ್ತಪಡಿಸುತ್ತಿರುವ ಕಳವಳಗಳ ಹಿನ್ನೆಲೆಯಲ್ಲಿ ಸಮಿತಿಯ ಶಿಫಾರಸುಗಳು ಮಹತ್ವವನ್ನು ಪಡೆದುಕೊಂಡಿವೆ.