ಮಣಿಪುರದಲ್ಲಿ ಎರಡು ನಿಷೇಧಿತ ಉಗ್ರಗಾಮಿ ಸಂಘಟನೆಗಳ ಶಿಬಿರಗಳನ್ನು ಭೇದಿಸಿದ ಭದ್ರತಾ ಪಡೆ
Photo credit: PTI
ಹೊಸದಿಲ್ಲಿ : ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಮಕೌ ಪೌರಾಬಿಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಕಂಗ್ಲೇ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್) ಅಡಗುತಾಣವನ್ನು ಬುಧವಾರ ಭೇದಿಸಲಾಗಿದ್ದು, ಈ ಸಂದರ್ಭದಲ್ಲಿ ಒಂದು ಏರ್ ಗನ್, ಒಂದು ಮೊಬೈಲ್ ಹ್ಯಾಂಡ್ಸೆಟ್ ಮತ್ತು ಒಂದು ಬುಲೆಟ್ ಪ್ರೂಫ್ ಹೆಲ್ಮೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ಮಕೌ ಪೌರಾಬಿಯಲ್ಲಿ ನಿಷೇಧಿತ PREPAK ನ ಮತ್ತೊಂದು ತರಬೇತಿ ಶಿಬಿರವನ್ನು ಬುಧವಾರ ನಾಶಪಡಿಸಲಾಗಿದೆ. ಈ ಸಂದರ್ಭದಲ್ಲಿ ಒಂದು INSAS LMG ಮ್ಯಾಗಝಿನ್, ಬಯೋನೆಟ್, ಐದು ಮರದ ಡಮ್ಮಿ ಗನ್ಗಳು, ಎರಡು ವಾಕಿ-ಟಾಕಿ ಸೆಟ್ಗಳು ಮತ್ತು ಕಾರ್ಟ್ರಿಜ್ಗಳನ್ನು ವಶಪಡಿಸಿಕೊಳ್ಳಲಾಯಿತು.
ಸುಲಿಗೆ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕಳೆದ ಎರಡು ದಿನಗಳಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್) ನ 9 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಪೊಲೀಸರು ಇಂಫಾಲ್ ಪೂರ್ವ ಜಿಲ್ಲೆಯ ಮಂತ್ರಿ ಪುಖ್ರಿ ಬಜಾರ್ನಲ್ಲಿ ಸುಲಿಗೆ ಚಟುವಟಿಕೆಗಳಲ್ಲಿ ತೊಡಗಿದ್ದ ಕೆಸಿಪಿ (ಪಿಡಬ್ಲ್ಯೂಜಿ) ಯ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ.
ಕೆಸಿಪಿ (ಪಿಡಬ್ಲ್ಯುಜಿ) ಸಂಘಟನೆಯ ಆರು ಕಾರ್ಯಕರ್ತರನ್ನು ಬುಧವಾರ ಕಕ್ಚಿಂಗ್ ಜಿಲ್ಲೆಯ ಬಿಜೋಯ್ಪುರ ಮಾಮಾಂಗ್ ಲೈಕೈ ಮತ್ತು ಮಖಾ ಲೈಕೈಯಿಂದ ಬಂಧಿಸಲಾಗಿದೆ.
ಮಂಗಳವಾರ, ಇಂಫಾಲ್ ಪಶ್ಚಿಮ ಜಿಲ್ಲೆಯ ತಂಗ್ಖುಲ್ ಅವೆನ್ಯೂ ಪ್ರದೇಶದಲ್ಲಿ ಸುಲಿಗೆ ಚಟುವಟಿಕೆಯಲ್ಲಿ ತೊಡಗಿದ್ದ ಕೆಸಿಪಿ (ಪಿಡಬ್ಲ್ಯೂಜಿ) ಯ ಒಬ್ಬ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.