ಜಾಮಿಯಾ ವಿವಿ ಸುತ್ತ ಬಿಗಿ ಭದ್ರತೆ: ಧರಣಿ ನಡೆಸುತ್ತಿದ್ದ 10 ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

Photo credit: PTI
ಹೊಸದಿಲ್ಲಿ: ಕಳೆದ ವರ್ಷ ಪ್ರತಿಭಟನೆಯನ್ನು ಆಯೋಜಿಸಿದ್ದ ಆರೋಪ ಎದುರಿಸುತ್ತಿರುವ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ, ಅವರ ವಿರುದ್ಧ ವಿಶ್ವವಿದ್ಯಾಲಯವು ಶಿಸ್ತು ಕ್ರಮ ಜರುಗಿಸಿರುವುದನ್ನು ಖಂಡಿಸಿ ಧರಣಿ ನಡೆಸುತ್ತಿದ್ದ ದಿಲ್ಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ 10 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಕ್ರಿಯಾಶೀಲತೆ ಮೇಲೆ ವಿಶ್ವವಿದ್ಯಾಲಯ ದಾಳಿ ನಡೆಸುತ್ತಿದೆ ಎಂದು ಖಂಡಿಸಿ ವಿದ್ಯಾರ್ಥಿಗಳು ಸೋಮವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿಯ ಧರಣಿ ಮುಂದುವರೆಸಲು ನಿರ್ಧರಿಸಿದ್ದಾರೆ.
ಆದರೆ, ಪ್ರತಿಭಟನಾನಿರತ ವಿದ್ಯಾರ್ಥಿಗಳು ಸೆಂಟ್ರಲ್ ಕ್ಯಾಂಟೀನ್ ಸೇರಿದಂತೆ ವಿಶ್ವವಿದ್ಯಾಲಯದ ಆಸ್ತಿಪಾಸ್ತಿಯನ್ನು ಧ್ವಂಸಗೊಳಿಸಿದ್ದು, ಭದ್ರತಾ ಸಲಹೆಗಾರರ ಕಚೇರಿಯ ದ್ವಾರವನ್ನು ಮುರಿದಿದ್ದರಿಂದ, ಆಡಳಿತ ಮಂಡಳಿಯು ಈ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಯಿತು ಎಂದು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಹೇಳಿದೆ.
ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ವಿದ್ಯಾರ್ಥಿ ಸಂಘಟನೆಗಳು, ತಮ್ಮ ಪ್ರತಿಭಟನೆಯು ಶಾಂತಿಯುತವಾಗಿತ್ತು ಎಂದು ಹೇಳಿವೆ.
ಪೊಲೀಸ್ ಮೂಲಗಳ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರತಿಭಟನಾ ಸ್ಥಳದಿಂದ ವಿದ್ಯಾರ್ಥಿಗಳನ್ನು ತೆರವುಗೊಳಿಸಲು ಪೊಲೀಸರು ಮಧ್ಯಪ್ರವೇಶಿಸಬೇಕು ಎಂದು ವಿಶ್ವವಿದ್ಯಾಲಯ ಮನವಿ ಮಾಡಿತ್ತು ಎಂದು ಹೇಳಲಾಗಿದೆ.
ಈ ನಡುವೆ, 2019ರಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ವಾರ್ಷಿಕೋತ್ಸವದ ಅಂಗವಾಗಿ ಡಿಸೆಂಬರ್ 15, 2024ರಂದು ಆಯೋಜನೆಯಾಗಿದ್ದ ‘ಜಾಮಿಯಾ ಪ್ರತಿರೋಧ ದಿನ’ ಕಾರ್ಯಕ್ರಮದಲ್ಲಿನ ಇಬ್ಬರು ಪಿಎಚ್ಡಿ ವಿದ್ಯಾರ್ಥಿಗಳ ಪಾತ್ರವನ್ನು ಪರಾಮರ್ಶಿಸಲು ಫೆಬ್ರವರಿ 25ರಂದು ಶಿಸ್ತು ಸಮಿತಿಯು ಸಭೆ ಸೇರಲಿದೆ.