ಚಂದ್ರನನ್ನು ಹಿಂದೂ ಸನಾತನ ರಾಷ್ಟ್ರ ಎಂದು ಘೋಷಿಸಬೇಕು: ಹಿಂದೂ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ
ಸ್ವಾಮಿ ಚಕ್ರಪಾಣಿ ಮಹಾರಾಜ್ (Photo:X/@SwamyChakrapani)
ಹೊಸದಿಲ್ಲಿ: ಚಂದ್ರಯಾನ-3 ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಕಾಲಿಟ್ಟ ಬೆನ್ನಲ್ಲೇ ಚಂದ್ರನನ್ನು ʼಹಿಂದು ರಾಷ್ಟ್ರʼ ಎಂದು ಘೋಷಿಸಬೇಕೆಂಬ ವಿಚಿತ್ರ ಬೇಡಿಕೆಯನ್ನು ವಿವಾದಾಸ್ಪದ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಅಖಿಲ ಭಾರತ ಹಿಂದೂ ಮಹಾಸಭಾ ಇದರ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಆಗ್ರಹಿಸಿದ್ದಾರೆ.
ಟ್ವಿಟರ್ನಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ ಸ್ವಾಮಿ ಚಕ್ರಪಾಣಿ, “ಚಂದ್ರನನ್ನು ಹಿಂದು ಸನಾತನ ರಾಷ್ಟ್ರ ಎಂದು ಸಂಸತ್ತು ಘೋಷಿಸಬೇಕು. ಚಂದ್ರಯಾನ-3 ಚಂದ್ರನ ಅಂಗಳಕ್ಕೆ ಕಾಲಿಟ್ಟ ಸ್ಥಳ “ಶಿವಶಕ್ತಿ ಪಾಯಿಂಟ್” ಅನ್ನು ಹಿಂದು ರಾಷ್ಟ್ರದ ರಾಜಧಾನಿಯೆಂದು ಘೋಷಿಸಬೇಕು, ಹೀಗೆ ಮಾಡುವ ಮೂಲಕ ಯಾವುದೇ ಉಗ್ರ ಅಥವಾ ಜಿಹಾದಿ ಮನೋವೃತ್ತಿಯವರು ಅಲ್ಲಿ ತಲುಪದಂತೆ ಮಾಡಬೇಕು,” ಎಂದು ಹೇಳಿದ್ದಾರೆ.
ಈ ಹಿಂದೆ ದೇಶ ಕೋವಿಡ್ ಸಾಂಕ್ರಾಮಿಕದಿಂದ ನಲುಗಿದಾಗ ರಾಜಧಾನಿಯಲ್ಲಿ “ಗೋಮೂತ್ರ ಪಾರ್ಟಿ” ನಡೆಸಿ ಸುದ್ದಿಯಾಗಿದ್ದರು ಚಕ್ರಪಾಣಿ. ಆಗ ಅವರು ಮತ್ತು ಇತರ ಮಹಾಸಭಾ ಸದಸ್ಯರು ಗೋಮೂತ್ರ ಸೇವಿಸಿದ್ದರು.
2018ರಲ್ಲಿ ಕೇರಳದಲ್ಲಿ ಭಾರೀ ಪ್ರವಾಹ ಸಂಭವಿಸಿದ್ದಾಗಲೂ ಪ್ರತಿಕ್ರಿಯಿಸಿದ್ದ ಈತ, ರಾಜ್ಯದಲ್ಲಿ ಬೀಫ್ ತಿನ್ನುವವರಿಗೆ ಯಾವುದೇ ಸಹಾಯ ದೊರೆಯಬಾರದು ಎಂದಿದ್ದರು.