ಶಿವಸೇನೆ Vs ಶಿವಸೇನೆ : ಉದ್ಧವ್ ಠಾಕ್ರೆ ಶಿವಸೇನೆ ಎದುರು 36 ಸ್ಥಾನಗಳಲ್ಲಿ ಜಯಭೇರಿ
ವಿಧಾನಸಭಾ ಚುನಾವಣೆ | 14 ಸ್ಥಾನಗಳಲ್ಲಿ ಸೋತ ಶಿಂದೆ ಶಿವಸೇನೆ
Photo : PTI
ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು 36 ವಿಧಾನಸಭಾ ಕ್ಷೇತ್ರಗಳಲ್ಲಿ ಪರಾಭವಗೊಳಿಸುವ ಮೂಲಕ, ಬಾಳ ಠಾಕ್ರೆ ಸ್ಥಾಪಿಸಿದ ನೈಜ ಶಿವಸೇನೆ ಯಾವುದು ಎಂಬ ಚರ್ಚೆಗೆ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಅಂತ್ಯ ಹಾಡಿದೆ.
ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಅಂಗ ಪಕ್ಷವಾದ ಶಿಂದೆ ನೇತೃತ್ವದ ಶಿವಸೇನೆ, ಶನಿವಾರ ಪ್ರಕಟವಾದ ಫಲಿತಾಂಶದಲ್ಲಿ ತಾನು ಸ್ಪರ್ಧಿಸಿದ್ದ 81 ಸ್ಥಾನಗಳ ಪೈಕಿ 57 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಅಂಗಪಕ್ಷವಾಗಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಚುನಾವಣೆಯಲ್ಲಿ 95 ಸ್ಥಾನಗಳಲ್ಲಿ ಸ್ಪರ್ಧಿಸಿದರೂ, ಕೇವಲ 20 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈ ಪೈಕಿ 14 ಸ್ಥಾನಗಳಲ್ಲಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯನ್ನು ಪರಾಭವಗೊಳಿಸಿದೆ.
ತಾವಾಡಿದ ಬಹು ದೊಡ್ಡ ರಾಜಕೀಯ ಜೂಜಾಟದಲ್ಲಿ ಜೂನ್ 2022ರಲ್ಲಿ ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂದೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ತಮ್ಮ ಬೆಂಬಲಿಗರ ನೆರವಿನೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು. ಈ ನಡೆಯಿಂದ ಶಿವಸೇನೆ ವಿಭಜನೆಯಾಗಿ, ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಸರಕಾರ ಪತನವಾಗಿತ್ತು. ಇದರಿಂದ ಪ್ರತಿನಿತ್ಯ ಎರಡು ಬಣಗಳ ನಡುವೆ ಸಂಘರ್ಷ ಸ್ಫೋಟಗೊಳ್ಳುತ್ತಿತ್ತು.
ಇದರ ಬೆನ್ನಿಗೇ, ಪಕ್ಷದ ಹೆಸರನ್ನು ತಮ್ಮ ಬಣಕ್ಕೆ ಪಡೆದ ಏಕನಾಥ್ ಶಿಂದೆ, ಅದರ ಚಿಹ್ನೆಯಾಗಿದ್ದ ಬಿಲ್ಲು-ಬಾಣವನ್ನೂ ಚುನಾವಣಾ ಆಯೋಗದಿಂದ ಪಡೆದುಕೊಂಡರು.
ಎರಡು ವರ್ಷಗಳ ಹಿಂದೆ ಏಕನಾಥ್ ಶಿಂದೆ ಬಂಡಾಯವೆದ್ದಾಗ, ಶಿವಸೇನೆಯ ಬಹುತೇಕ ಶಾಸಕರನ್ನು ಶಿಂದೆ ತಮ್ಮೊಂದಿಗೆ ಉಳಿಸಿಕೊಂಡರು ಹಾಗೂ ಅವರೆಲ್ಲ ಶಿಂದೆಯೊಂದಿಗೇ ಉಳಿಯುವ ನಿರ್ಧಾರ ಮಾಡಿದರು. ಶನಿವಾರ ಚುನಾವಣಾ ಮತ ಎಣಿಕೆ ನಡೆದಾಗ, ಅವರೆಲ್ಲ ಶಿಂದೆಗೆ ಲಾಭ ತಂದುಕೊಟ್ಟರು.
ಸಿಲ್ಲೋಡ್ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಅಬ್ದುಲ್ ಸತ್ತಾರ್, ಸುರೇಶ್ ಬಂಕರ್ ರನ್ನು ಪರಾಭವಗೊಳಿಸಿದರೆ, ಔರಂಗಾಬಾದ್ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರದೀಪ್ ಜೈಸ್ವಾಲ್, ಬಾಳಾಸಾಹೇಬ್ ತೋರಟ್ ರನ್ನು ಮಣಿಸಿದ್ದಾರೆ.
ಪಶ್ಚಿಮ ಔರಂಗಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಸಂಜಯ್ ಶಿರ್ಸಾತ್ ರಾಜು ಶಿಂದೆಯನ್ನು ಪರಾಭವಗೊಳಿಸಿದ್ದರೆ, ಪೈಥಾನ್ ವಿಧಾನಸಭಾ ಕ್ಷೇತ್ರದಲ್ಲಿ ದತ್ತಾತ್ರೇಯ್ ಗೋರ್ಡೆ ವಿರುದ್ಧ ವಿಲಾಸ್ ಭೂಮ್ರೆ ಗೆಲುವು ಸಾಧಿಸಿದ್ದಾರೆ.
ತಮ್ಮ ಪತ್ನಿ ಹಾಗೂ ಹಾಲಿ ಶಾಸಕಿ ಲತಾ ಸೋನಾವಾಲೆ ಬದಲಿಗೆ ಕಣಕ್ಕಿಳಿದಿದ್ದ ಚಂದ್ರಕಾಂತ್ ಸೋನಾವಾಲೆ ಶಿವಸೇನೆ (ಉದ್ಧವ್ ಬಣ)ಯ ಪ್ರಭಾಕರ್ ಸೋನಾವಾಲೆಯನ್ನು ಚೋಪ್ಡಾ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಳಿಸಿದ್ದಾರೆ.
ಕನ್ನಡ್ ವಿಧಾನಸಭಾ ಕ್ಷೇತ್ರದಲ್ಲಿ ಉದಯ್ ಸಿಂಗ್ ರಜಪೂತ್ ರನ್ನು ಸಂಜನಾ ಜಾಧವ್ ಮಣಿಸಿದ್ದರೆ, ಕಲಮ್ನುರಿ ವಿಧಾನಸಭಾ ಕ್ಷೇತ್ರದಲ್ಲಿ ಸಂತೋಷ್ ತಾರ್ಫೆಯನ್ನು ಪರಾಭವಗೊಳಿಸುವ ಮೂಲಕ ಸಂಜಯ್ ಬಂಗಾರ್ ಜಯಭೇರಿ ಬಾರಿಸಿದ್ದಾರೆ.
ನಂದಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಗಣೇಶ್ ಧತ್ರಾಕ್ ರನ್ನು ಸುಹಾಸ್ ಕಾಂಡೆ ಮಣಿಸಿದ್ದರೆ, ಮಾಲೆಗಾಂವ್ ಔಟರ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಶಾಂತ್ ಹಿರಾಯ್ ರನ್ನು ದಾದಾ ಭೂಸೆ ಪರಾಭವಗೊಳಿಸಿದ್ದಾರೆ.
ಆದಿವಾಸಿ ಪ್ರಾಬಲ್ಯದ ಪಾಲ್ಘಾಟ್ ವಿಧಾನಸಭಾ ಕ್ಷೇತ್ರದಲ್ಲಿ ಜಯೇಂದ್ರ ದುಬ್ಲಾರನ್ನು ರಾಜೇಂದ್ರ ಗಾವಿಟ್ ಸೋಲಿಸಿದ್ದಾರೆ.
ಮುಖ್ಯಮಂತ್ರಿ ಏಕನಾಥ್ ಶಿಂದೆ ಹಿಡಿತ ಹೊಂದಿರುವ ಥಾಣೆ ಜಿಲ್ಲೆಯ ಭಿವಾಂಡಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಉದ್ಧವ್ ಠಾಕ್ರೆ ಬಣದ ಮಹಾದೇವ್ ಘಟಾಲ್ ರನ್ನು ಶಾಂತಾರಾಮ್ ಮೋರೆ ಪರಾಭವಗೊಳಿಸಿದ್ದಾರೆ.
ಪಶ್ಚಿಮ ಕಲ್ಯಾಣ್ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವಾಸ್ ಭೋಯಿರ್ ರನ್ನು ಸಚಿನ್ ಬಸರೆ ಹಿಂದಿಕ್ಕಿದ್ದರೆ, ಥಾಣೆ ನಗರದ ಓವ್ಲಾ ಮಾಜಿವಾಡ ವಿಧಾನಸಭಾ ಕ್ಷೇತ್ರದಲ್ಲಿ ನರೇಶ್ ಮನೇರಾರನ್ನು ಪ್ರತಾಪ್ ಸರ್ನಾಯಕ್ ಪರಾಭವಗೊಳಿಸಿದ್ದಾರೆ.
ಕೋಪ್ರಿ-ಪಚ್ಪಖಡಿ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಗೆಲುವು ಸಾಧಿಸಿರುವ ಮುಖ್ಯಮಂತ್ರಿ ಏಕನಾಥ್ ಶಿಂದೆ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕೇದಾರ್ ದಿಘೆಯನ್ನು 1.2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಮಗಾಥಾಣೆ ವಿಧಾನಸಭಾ ಕ್ಷೇತ್ರದಲ್ಲಿ ಉದೇಶ್ ಪಾಟೇಕರ್ ರನ್ನು ಪ್ರಕಾಶ್ ಸುರ್ವೆ ಮಣಿಸಿದ್ದರೆ, ಭಾಂಡುಪ್ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್ ಕೋರ್ಗಾಂವ್ಕರ್ ಅವರನ್ನು ಅಶೋಕ್ ಪಾಟೀಲ್ ಪರಾಭವಗೊಳಿಸಿದ್ದಾರೆ.
ಪೂರ್ವ ಅಂಧೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಋತುರಾಜ್ ಲಟ್ಕೆ ಎದುರು ಪರಾಭವಗೊಂಡಿದ್ದ ಮುರ್ಜಿ ಪಟೇಲ್ ಈ ಬಾರಿ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಚೆಂಬೂರ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಕಾಶ್ ಫಟೇರ್ಪೇಕರ್ ರನ್ನು ತುಕರಾಂ ಕಾಟೆ ಪರಾಭವಗೊಳಿಸಿದ್ದಾರೆ. ಲಟ್ಕೆ ಹಾಗೂ ಫಟೇರ್ಪೇಕರ್ ಇಬ್ಬರೂ ಹಾಲಿ ಶಾಸಕರಾಗಿದ್ದು, ಈ ಹಿಂದೆ ಉದ್ಧವ್ ಠಾಕ್ರೆಯ ನಿಕಟವರ್ತಿಗಳಾಗಿದ್ದರು.
ಕರಾವಳಿಯ ದಪೋಲಿ ವಿಧಾನಸಭಾ ಕ್ಷೇತ್ರದಲ್ಲಿ ಸಂಜಯ್ ಕದಮ್ ರನ್ನು ಯೋಗೇಶ್ ಕದಮ್ ಪರಾಭವಗೊಳಿಸಿದ್ದಾರೆ.
ರತ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬಾಲ್ ಮಾನೆ ಎದುರು ಸಚಿವ ಉದಯ್ ಸಮಂತ್ ಜಯಭೇರಿ ಬಾರಿಸಿದ್ದರೆ, ರಾಜಪುರ್ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜನ್ ಸಾಲ್ವಿಯನ್ನು ಕಿರಣ್ ಸಮಂತ್ ಪರಾಭಗೊಳಿಸಿದ್ದಾರೆ.
ಚುನಾವಣೆಗೂ ಮುನ್ನ ಬಿಜೆಪಿಯಿಂದ ಶಿವಸೇನೆಗೆ ಪಕ್ಷಾಂತರ ಮಾಡಿದ್ದ ನೀಲೇಶ್ ರಾಣೆ, ಕುದಲ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ವೈಭವ್ ನಾಯಕ್ ರನ್ನು ಪರಾಭವಗೊಳಿಸಿದ್ದಾರೆ. ಗೋವಾ ಬಳಿಯ ಸಾವಂತ್ ವಾಡಿ ವಿಧಾನಸಭಾ ಕ್ಷೇತ್ರದಲ್ಲಿ ರಾಜನ್ ತೇಲಿ ವಿರುದ್ಧ ದೀಪಕ್ ಕೇಸರ್ಕರ್ ಮೇಲುಗೈ ಸಾಧಿಸಿದ್ದಾರೆ. ರಾಧಾನಗರಿ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಪಿ.ಪಾಟೀಲ್ ರನ್ನು ಅಬಿತ್ಕರ್ ಪರಾಭವಗೊಳಿಸಿದ್ದಾರೆ.
ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ವಿರುದ್ಧ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಮೇಹ್ಕರ್ ವಿಧಾನಸಭಾ ಕ್ಷೇತ್ರದಲ್ಲಿ ಏಕನಾಥ್ ಶಿಂದೆ ನೇತೃತ್ವದ ಸಂಜಯ್ ಭಾಸ್ಕರ್ ರಾಯ್ ಮುಲ್ಕರ್ ರನ್ನು ರಂಭು ಖಾರತ್ ಪರಾಭವಗೊಳಿಸಿದ್ದರೆ, ಬಾಲಾಪುರ್ ವಿಧಾನಸಭಾ ಕ್ಷೇತ್ರದಲ್ಲಿ ನಿತಿನ್ ಭಿಕನ್ ರಾವ್ ದೇಶ್ ಮುಖ್ ವಿಜಯದ ನಗೆ ಬೀರಿದ್ದಾರೆ. ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಅಭ್ಯರ್ಥಿಯಾಗಿದ್ದ ಭಗವಾನ್ ಸಿರಸ್ಕರ್ ಈ ಕ್ಷೇತ್ರದಲ್ಲಿ ಮೂರನೆ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.
ವಿಖ್ರೋಲಿ ವಿಧಾನಸಭಾ ಕ್ಷೇತ್ರದಲ್ಲಿ ಸುವರ್ಣ ಕರಾಂಜೆಯನ್ನು ಸುನೀಲ್ ರಾವತ್ ಪರಾಭವಗೊಳಿಸಿದ್ದರೆ, ಅವರ ಸಹೋದ್ಯೋಗಿ ಅನಂತ್ ನಾರ್, ಜೋಗೇಶ್ವರಿ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಎದುರಾಳಿ ಮನೀಶಾ ವೈಕರ್ ಅವರನ್ನು ಪರಾಭವಗೊಳಿಸಿದ್ದಾರೆ.
ದಿಂಡೋಶಿ ವಿಧಾನಸಭಾ ಕ್ಷೇತ್ರದಲ್ಲಿ ಸಂಜಯ್ ನಿರುಪಮ್ ರನ್ನು ಸುನೀಲ್ ಪ್ರಭು ಪರಾಭವಗೊಳಿಸಿದ್ದರೆ, ಮಹೀಮ್ ವಿಧಾನಸಭಾ ಕ್ಷೇತ್ರದಲ್ಲಿ ಸದಾ ಸರ್ವಂಕರ್ ರನ್ನು ಮಹೇಶ್ ಸಾವಂತ್ ಪರಾಭವಗೊಳಿಸಿದ್ದಾರೆ.
ಉದ್ಧವ್ ಠಾಕ್ರೆಯ ಪುತ್ರ ಹಾಗೂ ಮಾಜಿ ರಾಜ್ಯ ಸಚಿವ ಆದಿತ್ಯ ಠಾಕ್ರೆ ವೊರ್ಲಿ ವಿಧಾನಸಭಾ ಕ್ಷೇತ್ರವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದು, ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಸೇರ್ಪಡೆಯಾಗಿದ್ದ ಮಿಲಿಂದ್ ದಿಯೋರಾರನ್ನು ಪರಾಭವಗೊಳಿಸಿದ್ದಾರೆ.
ಬೈಕುಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಯಾಮಿನಿ ಜಾಧವ್ ರನ್ನು ಮನೋಜ್ ಜಾಮ್ ಸೂತ್ಕರ್ ಪರಾಭವಗೊಳಿಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಶೇ. 9.96ರಷ್ಟು ಮತ ಪ್ರಮಾಣ ಪಡೆದಿದ್ದರೆ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಶೇ. 12.38ರಷ್ಟು ಮತ ಪ್ರಮಾಣ ಪಡೆದಿದೆ.
ಶನಿವಾರ ಪ್ರಕಟಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ನೇತೃತ್ವದ ಮಹಾಯುತಿ ಸರಕಾರ ಅಧಿಕಾರ ಉಳಿಸಿಕೊಂಡಿದ್ದರೆ, ಅಧಿಕಾರವನ್ನು ತನ್ನ ಕೈವಶ ಮಾಡಿಕೊಳ್ಳುವ ಕನಸು ಕಾಣುತ್ತಿದ್ದ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾವಿಕಾಸ್ ಅಘಾಡಿ, ಕೇವಲ 46 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತೀವ್ರ ಆಘಾತಕ್ಕೆ ತುತ್ತಾಗಿದೆ.
ಮಹಾಯುತಿ ಮೈತ್ರಿಕೂಟದ ಬಿಜೆಪಿ 132, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 57 ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಕಾಂಗ್ರೆಸ್ 16, ಶರದ್ ಪವಾರ್ ನೇತೃತ್ವದ ಎನ್ಸಿಪಿ 10 ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿವೆ.