ಸಿಬಿಐ ತಂಡ ಕಿರುಕುಳ ನೀಡುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ಒಡಿಶಾದ ಹಿರಿಯ ಐಎಎಸ್ ಅಧಿಕಾರಿ ಬೆದರಿಕೆ

ಭುವನೇಶ್ವರ: ಮಂಗಳವಾರ ತಮ್ಮ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ಸಿಬಿಐ ತಂಡದೊಂದಿಗೆ ಬಿಸಿಬಿಸಿ ಮಾತಿನ ಚಕಮಕಿ ನಡೆಸಿದ ಹಿರಿಯ ಐಎಎಸ್ ಅಧಿಕಾರಿ ಬಿಷ್ಣುಪಾದ ಸೇಠಿ, ನನ್ನ ಹೆಸರು ಹಾಗೂ ವರ್ಚಸ್ಸಿಗೆ ಹಾನಿಯಾಗಿರುವುದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
10 ಲಕ್ಷ ರೂ. ಲಂಚ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ಇಂದು ಬೆಳಗ್ಗೆ 8 ಗಂಟೆಗೆ ಸಿಬಿಐ ತಂಡ ಬಿಷ್ಣುಪಾದ ಸೇಠಿಯ ಅಧಿಕೃತ ನಿವಾಸಕ್ಕೆ ತಲುಪಿತು.
ನಾನು ಈ ಪ್ರಕರಣದಲ್ಲಿ ಅಮಾಯಕನಾಗಿದ್ದರೂ, ಯಾರೂ ನನ್ನ ಮಾತನ್ನು ಕೇಳಿಸಿಕೊಳ್ಳದೆ ಇರುವುದರಿಂದ ನಾನು ಅಸಹಾಯಕನಾಗಿದ್ದೇನೆ. ಹೀಗಾಗಿ, ನಾನು ನನ್ನ ಜೀವವನ್ನು ಅಂತ್ಯಗೊಳಿಸಿಕೊಳ್ಳುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಬೆದರಿಕೆ ಒಡ್ಡಿದರು.
“ನಾನು ರಾಜೀನಾಮೆ ಸಲ್ಲಿಸಲು ಸಿದ್ಧನಿದ್ದು, ಕಿರುಕುಳದ ಹಿನ್ನೆಲೆಯಲ್ಲಿ ನಾನು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು” ಎಂದು ತಮ್ಮ ನಿವಾಸದೆದುರು ನೆರೆದಿದ್ದ ಸುದ್ದಿಗಾರರನ್ನುದ್ದೇಶಿಸಿ ಬಿಷ್ಣುಪಾದ ಸೇಠಿ ಹೇಳಿದರು. ಈ ವೇಳೆ ಸಿಬಿಐ ಅಧಿಕಾರಿಗಳೂ ಉಪಸ್ಥಿತರಿದ್ದರು.
ಸಿಬಿಐ ತಂಡ ನನ್ನ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಹೋಗಿದೆ ಹಾಗೂ ಬಾಲಸೋರ್ ಜಿಲ್ಲೆಯಲ್ಲಿರುವ ನನ್ನ ಸ್ವಗ್ರಾಮದಲ್ಲೂ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅವರು ಆರೋಪಿಸಿದರು. “ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಅವರು ಸ್ಥಳೀಯ ಪೊಲೀಸರನ್ನು ಕರೆ ತಂದಿರಲಿಲ್ಲ” ಎಂದೂ ಅವರು ದೂರಿದರು.
ನಾನು ದಲಿತನಾಗಿರುವುದರಿಂದ ನನ್ನನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು 1995ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ವಿಷ್ಣುಪಾದ ಸೇಠಿ ಆರೋಪಿಸಿದರು.
ಕೇಂದ್ರ ಸರಕಾರಿ ಸಂಸ್ಥೆಯಾದ ಬ್ರಿಡ್ಜ್ ಆ್ಯಂಡ್ ರೂಫ್ ಕಂಪನಿ (ಇಂಡಿಯಾ) ಲಿಮಿಟೆಡ್ ನೊಂದಿಗಾಗಲಿ ಅಥವಾ ಅದರ ಸಮೂಹ ಪ್ರಧಾನ ವ್ಯವಸ್ಥಾಪಕ ಚಂಚಲ್ ಮುಖರ್ಜಿಯೊಂದಿಗಾಗಲಿ ನನಗೆ ಯಾವುದೇ ಸಂಪರ್ಕವಿಲ್ಲ ಎಂದು ಸೇಠಿ ಪ್ರತಿಪಾದಿಸಿದರು. ಲಂಚ ಪ್ರಕರಣದಲ್ಲಿ ಚಂಚಲ್ ಮುಖರ್ಜಿ ಕಳೆದ ವರ್ಷ ಬಂಧನಕ್ಕೀಡಾಗಿದ್ದರು.
ಭುವನೇಶ್ವರ ಮೂಲದ ಪೆಂಟಾ ಎ ಸ್ಟುಡಿಯೊ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಸಂತೋಷ್ ಮೊಹರಾನರಿಂದ ಲಂಚ ಸ್ವೀಕರಿಸಿದ ಆರೋಪದ ಮೇಲೆ ಡಿಸೆಂಬರ್ 7ರಂದು ಚಂಚಲ್ ಮುಖರ್ಜಿ ಹಾಗೂ ಮಧ್ಯಸವರ್ತಿ ದೇಬದತ್ತ ಮೊಹಾಪಾತ್ರರನ್ನು ಸಿಬಿಐ ಬಂಧಿಸಿತ್ತು. ಅವರೊಂದಿಗೆ ಮತ್ತೋರ್ವ ವ್ಯಕ್ತಿಯನ್ನೂ ಈ ಸಂಬಂಧ ಬಂಧಿಸಲಾಗಿತ್ತು.
ಈ ಮೂವರ ಬಂಧನದ ನಂತರ, ತನ್ನೆದುರು ಹಾಜರಾಗುವಂತೆ ಡಿಸೆಂಬರ್ 10ರಂದು ವಿಷ್ಣುಪಾದ ಸೇಠಿಗೆ ಸಿಬಿಐ ನೋಟಿಸ್ ಜಾರಿಗೊಳಿಸಿತ್ತು.