ಹಿರಿಯ ಪತ್ರಕರ್ತ ಉಮೇಶ್ ಉಪಾಧ್ಯಾಯ ಮಹಡಿಯಿಂದ ಬಿದ್ದು ಮೃತ್ಯು
PC: x.com/ndtv
ಹೊಸದಿಲ್ಲಿ: ಹಿರಿಯ ಪತ್ರಕರ್ತ ಉಮೇಶ್ ಉಪಾಧ್ಯಾಯ (66) ಇಲ್ಲಿನ ವಸಂತ್ ಕುಂಜ್ ನಲ್ಲಿ ಭಾನುವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ವಸಂತ್ ಕುಂಜ್ ಸಿ-8 ಬ್ಲಾಕ್ ನಲ್ಲಿದ್ದ ತಮ್ಮ ಮನೆಯ ನವೀಕರಣ ಕಾರ್ಯವನ್ನು ವೀಕ್ಷಿಸಲು ತೆರಳಿದ್ದ ಅವರು, ಬೆಳಿಗ್ಗೆ 10.30ರ ಸುಮಾರಿಗೆ ಆಕಸ್ಮಿಕವಾಗಿ ನಾಲ್ಕನೇ ಮಹಡಿಯಿಂದ ಎರಡನೇ ಮಹಡಿಗೆ ಬಿದ್ದರು ಎಂದು ಪೊಲೀಸರು ಹೇಳಿದ್ದಾರೆ. ತಲೆಗೆ ಗಂಭೀರ ಗಾಯಗಳಾಗಿದ್ದ ಅವರಿಗೆ ದೇಹದ ಇತರ ಭಾಗಗಳಿಗೂ ಗಾಯಗಳಾಗಿದ್ದವು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ರಾತ್ರಿ ಮೃತಪಟ್ಟರು.
ಪತ್ರಿಕೋದ್ಯಮದಲ್ಲಿ ನಾಲ್ಕು ದಶಕಗಳ ಸುಧೀರ್ಘ ಸೇವೆ ಸಲ್ಲಿಸಿದ್ದ ಅವರು, ನೆಟ್ ವರ್ಕ್ 18 ವಾಹಿನಿಯ ಅಧ್ಯಕ್ಷರಾಗಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಝೀ ನ್ಯೂಸ್, ಸಾಬ್ ಟಿವಿ, ಜನ್ಮತ್ ಟಿವಿ, ದೂರದರ್ಶನ ಮತ್ತು ಪಿಟಿಐ ಸೇರಿದಂತೆ ಹಲವು ಸುದ್ದಿಸಂಸ್ಥೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.
ಸತೀಶ್ ಅಕಾಲಿಕ ನಿಧನಕ್ಕೆ ಎಕ್ಸ್ ಪೋಸ್ಟ್ ನಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, "ಹಿರಿಯ ಪತ್ರಕರ್ತ ಮತ್ತು ಲೇಖಕ ಉಮೇಶ್ ಉಪಾಧ್ಯಾಯ ನಿಧನದಿಂದ ತೀವ್ರ ಆಘಾತವಾಗಿದೆ. ಡಿಜಿಟಲ್ ಮಾಧ್ಯಮ ಮತ್ತು ಟಿವಿ ಕ್ಷೇತ್ರದಲ್ಲಿ ಅವರು ಅಮೋಘ ಸೇವೆ ಸಲ್ಲಿಸಿದ್ದರು. ಅವರ ನಿಧನ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಈ ದುಃಖದ ಸಂದರ್ಭದಲ್ಲಿ ಸಾಂತ್ವನ ಹೇಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ.