2000 ಅಂಕ ಕುಸಿತ ಕಂಡ ಸೆನ್ಸೆಕ್ಸ್
ಸಾಂದರ್ಭಿಕ ಚಿತ್ರ (PTI)
ಮುಂಬೈ: ಹಲವು ಜಾಗತಿಕ ಮತ್ತು ಸ್ಥಳೀಯ ಅಂಶಗಳ ಕಾರಣದಿಂದ ಮಂಗಳವಾರ ಸೆನ್ಸೆಕ್ಸ್ ಮಹಾಪತನ ಕಂಡಿದೆ. ವಿದೇಶಿ ಹಾಗೂ ದೇಶೀಯ ಫಂಡ್ ಗಳು ನಿವ್ವಳ ಖರೀದಿದಾರರಾಗಿದ್ದರೂ, ಅಪಾಯದ ಮುನ್ಸೂಚನೆಯಲ್ಲೇ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ ಹಾಗೂ ನಿಫ್ಟಿ ಇಡೀ ದಿನ ಕುಸಿತದ ಹಾದಿ ಹಿಡಿದವು.
ಜಪಾನ್ 17 ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿದರ ಏರಿಕೆ ಮಾಡಿರುವುದು ಮತ್ತು ಷೇರು ಮಾರುಕಟ್ಟೆಯ ಕೆಲ ವಲಯಗಳಲ್ಲಿ ಅಧಿಕ ಮೌಲ್ಯವನ್ನು ಬಿಂಬಿಸಲಾಗಿದೆ ಎಂಬ ಆತಂಕ ಇದಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಸೆನ್ಸೆಕ್ಸ್ 72012 ಅಂಕಗಳೊಂದಿಗೆ ವಹಿವಾಟು ಮುಗಿಸಿದ್ದು, ಇದು ಹಿಂದಿನ ದಿನಕ್ಕೆ ಹೋಲಿಸಿದರೆ 736 ಅಂಕ ಅಥವಾ ಶೇಕಡ 1ರಷ್ಟು ಕಡಿಮೆ. ನಿಫ್ಟಿ ಶೇಕಡ 1.1ರಷ್ಟು ಕುಸಿತ ದಾಖಲಿಸಿ 21817 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ.
ಮಾರ್ಚ್ 7ರಂದು ಸರ್ವಕಾಲಿಕ ದಾಖಲೆಯಾದ 74,119 ಅಂಕಗಳನ್ನು ದಾಖಲಿಸಿದ ನಿಫ್ಟಿ ಆ ಬಳಿಕ ಸುಮಾರು 2000 ಅಂಕಗಳನ್ನು ಕಳೆದುಕೊಂಡಿದೆ. ಮಂಗಳವಾರ ಆಗಿರುವ 736 ಅಂಕಗಳ ನಷ್ಟ ಮಾರ್ಚ್ 13ರ ಬಳಿಕ ಅತಿದೊಡ್ಡ ನಷ್ಟವಾಗಿದೆ. ಮಾರ್ಚ್ 13ರಂದು ಸೆನ್ಸೆಕ್ಸ್ 900 ಅಂಕಗಳಷ್ಟು ಕುಸಿದಿತ್ತು. ಜಾಗತಿಕವಾಗಿ ಕೂಡಾ ಈ ವರ್ಷ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಕಡಿತಗಳಿಸುತ್ತದೆ ಎಂಬ ನಿರೀಕ್ಷೆಯಿಂದ ಷೇರುಗಳ ವಹಿವಾಟು ತೇಜಿ ಕಳೆದುಕೊಂಡಿವೆ.
ದೇಶೀಯ ಅಧಿಕ ಮೌಲ್ಯದ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಲು ಆರಂಭಿಸಿದ್ದರಿಂದ ಮಂಗಳವಾರ ಕುಸಿತ ಸಂಭವಿಸಿದೆ. ದಿನದ ಕೊನೆಗೆ ಬಿಎಸ್ಇ ಅಂಕಿ ಅಂಶಗಳ ಪ್ರಕಾರ, 7449 ಕೋಟಿ ರೂಪಾಯಿಯ ನಿವ್ವಳ ಖರೀದಿ ದೇಶೀಯ ಫಂಡ್ ಗಳಿಗೆ ಆಗಿದೆ. ವಿದೇಶಿ ಹೂಡಿಕೆದಾರರು 1421 ಕೋಟಿಯ ಫಂಡ್ ಗಳನ್ನು ಖರೀದಿಸಿದ್ದಾರೆ. ಸೋಮವಾರದ ಕುಸಿತದಿಂದಾಗಿ ಹೂಡಿಕೆದಾರ ಸಂಪತ್ತು 5.2 ಲಕ್ಷ ಕೋಟಿ ಕುಸಿದಿದ್ದು, ಬಿಎಸ್ಇ ಮಾರುಕಟ್ಟೆಯ ನಗದೀಕರಣ ಮೌಲ್ಯ 380.6 ಲಕ್ಷ ಕೋಟಿ ಆಗಿದೆ.
ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ ನ ವಿನೋದ್ ನಾಯರ್ ಅವರ ಪ್ರಕಾರ, ಜಪಾನ್ ಬ್ಯಾಂಕ್ ಬಡ್ಡಿ ಏರಿಕೆ ಮಾಡಿದ ಬಳಿಕ, ಏಷ್ಯನ್ ಮಾರುಕಟ್ಟೆಯ ಪ್ರವೃತ್ತಿ ಉತ್ತೇಜನಕಾರಿಯಾಗಿದೆ. ಇದು ಭಾರತೀಯ ಮಾರುಕಟ್ಟೆಯನ್ನು ಹಿಂದಕ್ಕೆಳೆದಿದ್ದು, ಇದರಿಂದ ಕುಸಿತವುಂಟಾಗಿದೆ.