ವಿದೇಶಿ ನಿಧಿ ಖರೀದಿ ಹಿನ್ನೆಲೆ: ಮೊದಲ ಬಾರಿ 69 ಸಾವಿರದ ಗಡಿದಾಟಿದ ಸೆನ್ಸೆಕ್ಸ್
ಸಾಂದರ್ಭಿಕ ಚಿತ್ರ (PTI)
ಮುಂಬೈ: ವಿದೇಶಿ ನಿಧಿಗಳು ಅಗ್ರಗಣ್ಯ ಖರೀದಿದಾರರಾಗಿ ರೂಪುಗೊಳ್ಳುವ ಮೂಲಕ ಮಂಗಳವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ವಹಿವಾಟು ತೇಜಿಯಾಗಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ ಸತತ ಮೂರು ಸೆಷನ್ ಗಳಲ್ಲಿ ಕೂಡಾ ಇದೇ ಮೊದಲ ಬಾರಿಗೆ ಹೊಸ ಎತ್ತರ ತಲುಪಿವೆ.
ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಎನಿಸಿದ 69381 ಅಂಕಗಳನ್ನು ಆರಂಭಿಕ ಸೆಷನ್ನಲ್ಲಿ ತಲುಪಿ, 69296 ಅಂಕಗಳಲ್ಲಿ ಕೊನೆಗೊಂಡಿತು. ಇದು ಹಿಂದಿನ ದಿನದ ಸೂಚ್ಯಂಕಕ್ಕಿಂತ 431 ಅಂಕಗಳಷ್ಟು ಅಧಿಕ. ನಿಫ್ಟಿ 168 ಅಂಕಗಳ ಪ್ರಗತಿ ಸಾಧಿಸಿ 20885 ಅಂಕಗಳೊಂದಿಗೆ ಕೊನೆಗೊಂಡಿದೆ.
ಈ ಒಂದು ದಿನದ ಮುನ್ನಡೆಯೊಂದಿಗೆ ಹೂಡಿಕೆದಾರರ ಸಂಪತ್ತು 3.1 ಲಕ್ಷ ಕೋಟಿಯಷ್ಟು ಹೆಚ್ಚಿದ್ದು, ಬಿಎಸ್ಇ ಮಾರುಕಟ್ಟೆಯ ನಗದೀಕರಣ ಮೌಲ್ಯ 353.2 ಲಕ್ಷ ಕೋಟಿ ರೂಪಾಯಿ ಆಗಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯ ಗಣನೀಯ ಸಾಧನೆ ನಿರೀಕ್ಷೆಯಲ್ಲಿ ಷೇರು ಮಾರುಕಟ್ಟೆ ಕೂಡಾ ಶುಕ್ರವಾರದಿಂದಲೇ ತೇಜಿ ಕಂಡಿತ್ತು. ಸೋಮವಾರ ಚುನಾವಣಾ ಫಲಿತಾಂಶದ ನಿರೀಕ್ಷೆ ನಿಜವಾದ ಹಿನ್ನೆಲೆಯಲ್ಲಿ ಮಂಗಳವಾರ ವಹಿವಾಟು ಮತ್ತಷ್ಟು ಎತ್ತರಕ್ಕೇರಿತು. ಅಮೆರಿಕದ ಗಿಲ್ಟ್ ಪ್ರತಿಫಲ ಕುಸಿತದ ಹಿನ್ನೆಲೆಯಲ್ಲಿ ಜಾಗತಿಕವಗಿ ಬಡ್ಡಿದರ ಇಳಿಕೆಯಾಗುತ್ತಿದ್ದು, ಕಚ್ಚಾ ತೈಲದ ಬೆಲೆ ಕೂಡಾ ಬ್ಯಾರಲ್ಗೆ 80 ಡಾಲರ್ ಗಿಂತ ಕೆಳಗೆ ಸ್ಥಿರವಾಗಿರುವುದು, ಜುಲೈ-ಸೆಪ್ಟೆಂಬರ್ ಅವಧಿಯ ಜಿಡಿಪಿ ಪ್ರಗತಿ ದರ ಹೆಚ್ಚಿರುವುದು ಹೂಡಿಕೆದಾರರ ಭಾವನೆಗಳಿಗೆ ಪೂರಕವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.