ಎರಡು ವರ್ಷಗಳಲ್ಲೇ ಮಹಾಕುಸಿತ ಕಂಡ ಸೆನ್ಸೆಕ್ಸ್
ಸಾಂದರ್ಭಿಕ ಚಿತ್ರ (PTI)
ಮುಂಬೈ: ಸತತ ಹಲವು ವಾರಗಳ ಕಾಲ ಏರಿಕೆಯ ಹಾದಿಯಲ್ಲಿದ್ದ ಸೆನ್ಸೆಕ್ಸ್ ಬುಧವಾರ ಎರಡು ವರ್ಷಗಳಲ್ಲೇ ಅತಿದೊಡ್ಡ ಕುಸಿತವನ್ನು ಕಂಡಿದೆ. 1628 ಅಂಕಗಳ ಕುಸಿತ ಕಂಡು 71501 ಅಂಕಗಳೊಂದಿಗೆ ವಹಿವಾಟು ಮುಕ್ತಾಯವಾಗಿದ್ದು, ಶೇ. 2.2ರಷ್ಟು ಕುಸಿತ ದಾಖಲಾಗಿದೆ. ಒಂದೇ ಅವಧಿಯಲ್ಲಿ ಇಷ್ಟೊಂದು ಕುಸಿತ ಕಂಡಿರುವುದು ಇದೇ ಮೊದಲು. ಇದರಿಂದಾಗಿ ಹೂಡಿಕೆದಾರರಿಗೆ 4 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವಾಗಿರುವುದು ಬಿಎಸ್ಇ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ದೇಶದ ಅತ್ಯಂತ ಮೌಲಿಕ ಸಾಲನೀಡಿಕೆ ಸಂಸ್ಥೆ ಎನಿಸಿದ ಎಚ್ಡಿಎಫ್ಸಿ ಬ್ಯಾಂಕಿನ ತ್ರೈಮಾಸಿಕ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವ ಕಾರಣದಿಂದ ಈ ಬ್ಯಾಂಕಿನ ಷೇರುಗಳು ಬುಧವಾರ ಶೇಕಡ 8ರಷ್ಟು ಕುಸಿತ ಕಂಡಿವೆ.
ಇದು ಹೂಡಿಕೆದಾರರ ಭಾವನೆಗಳ ಮೇಳೆ ಪರಿಣಾಮ ಬೀರಿದ್ದು, ಎಲ್ಲ ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳ ಮೇಲೆ ಪರಿಣಾಮ ಬೀರಿರುವುದು ಸೆನ್ಸೆಕ್ಸ್ನ ನಾಲ್ಕು ಅಂಕಗಳ ಮಹಾ ಕುಸಿತಕ್ಕೆ ಕಾರಣವಾಗಿದೆ.
ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಮತ್ತು ಹಿಂದಿನಷ್ಟು ರಭಸದಲ್ಲಿ ಕೇಂದ್ರೀಯ ಬ್ಯಾಂಕ್ ಬಡ್ಡಿದರವನ್ನು ಕಡಿತಗೊಳಿಸುತ್ತಿಲ್ಲ ಎಂದು ಮನವರಿಕೆಯಾಗಿರುವ ಕಾರಣ ವಾಲ್ಸ್ಟ್ರೀಟ್ನಲ್ಲಿ ಹಿಂದಿನ ದಿನ ದುರ್ಬಲ ಪ್ರದರ್ಶನ ಕೂಡಾ ಭಾರತೀಯ ಬಂಡವಾಳ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮಾರುಕಟ್ಟೆಯಲ್ಲಿ ದಿನದ ಹೆಚ್ಚಿನ ಮಾರಾಟ ವಿದೇಶಿ ಹೂಡಿಕೆದಾರರಿಂದ ಕಂಡುಬಂತು. ಬಿಎಸ್ಇಯ ಸೆಷನ್ ಅಂತ್ಯದ ಅಂಕಿ ಅಂಶಗಳ ಪ್ರಕಾರ ಎಫ್ಪಿಐಗಳು ನಿವ್ವಳ 10578 ಕೋಟಿ ರೂಪಾಯಿಗಳ ಷೇರುಗಳನ್ನು ಮಾರಾಟ ಮಾಡಿದ್ದು, ಇದು 2023ರ ಜುಲೈ 31ರ ಬಳಿಕ ಒಂದೇ ಅವಧಿಯಲ್ಲಿ ನಡೆದ ಅತಿದೊಡ್ಡ ಮಾರಾಟವಾಗಿದೆ. ಇದಕ್ಕೆ ವಿರುದ್ಧವಾಗಿ ದೇಶೀಯ ಹೂಡಿಕೆದಾರರ ನಿವ್ವಳ ಖರೀದಿ ಕೇವಲ 4006 ಕೋಟಿ ರೂಪಾಯಿ ಎಂದು ಅಂಕಿ ಅಂಶಗಳು ಹೇಳಿವೆ.