ಪಂಜಾಬ್ | 18 ತಿಂಗಳಲ್ಲಿ 11 ಮಂದಿಯ ಕೊಲೆ : ʼಸರಣಿ ಹಂತಕʼನ ಬಂಧನ
ಲಿಪ್ಟ್ ನೀಡುವ ನೆಪದಲ್ಲಿ ಜನರನ್ನು ತನ್ನ ಕಾರಿನಲ್ಲಿ ಕುಳ್ಳಿರಿಸಿ ಬಳಿಕ ಕೊಲೆ ಮಾಡುತ್ತಿದ್ದ ಆರೋಪಿ
Photo credit: tribuneindia.com
ಪಂಜಾಬ್: ಕಳೆದ 18 ತಿಂಗಳಲ್ಲಿ 11 ಜನರನ್ನು ಕೊಲೆ ಮಾಡಿದ ʼಸರಣಿ ಹಂತಕʼನೋರ್ವನನ್ನು ಪಂಜಾಬ್ ನ ರೂಪನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಹೋಶಿಯಾರ್ ಪುರ ಜಿಲ್ಲೆಯ ಚೌರಾ ಗ್ರಾಮದ ರಾಮ್ ಸರೂಪ್ ಅಲಿಯಾಸ್ ಸೋಧಿ ಎಂದು ಗುರುತಿಸಲಾಗಿದೆ. ಸೋಮವಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಈತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಈತ ಸರಣಿ ಹಂತಕ ಎಂಬುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಕೊಲೆ ಮಾಡಿದ 11 ಮಂದಿ ಕೂಡ ಪುರುಷರಾಗಿದ್ದಾರೆ. ಈತ ಲಿಪ್ಟ್ ನೀಡುವ ನೆಪದಲ್ಲಿ ಜನರನ್ನು ತನ್ನ ಕಾರಿನಲ್ಲಿ ಕುಳ್ಳಿರಿಸಿ ಬಳಿಕ ಅವರನ್ನು ದರೋಡೆ ಮಾಡಿ ಕೊಲೆ ಮಾಡುತ್ತಿದ್ದ ಎಂದು ಪೊಲೀಸರು ತನಿಖೆಯ ವೇಳೆ ಕಂಡುಕೊಂಡಿದ್ದಾರೆ.
ರೂಪನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಸಿಂಗ್ ಖುರಾನಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿನ ಘೋರ ಅಪರಾಧ ಕೃತ್ಯಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಕಿರಾತ್ಪುರ ಸಾಹಿಬ್ ಪಟ್ಟಣದಲ್ಲಿನ ಕೊಲೆ ಪ್ರಕರಣವೊಂದನ್ನು ಉಲ್ಲೇಖಿಸಿದ ಅವರು, ಟೋಲ್ ಪ್ಲಾಝಾದಲ್ಲಿ ಚಹಾ ಮತ್ತು ನೀರು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಆ.18ರಂದು ಕೊಲೆ ಮಾಡಲಾಗಿದೆ. ಈ ಪ್ರಕರಣದ ತನಿಖೆಗೆ ಸಂಬಂಧಿಸಿ ರಾಮ್ ಸರೂಪ್ ನನ್ನು ಬಂಧಿಸಲಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಈತ ನಡೆಸಿರುವ ಹೆಚ್ಚಿನ ಕೃತ್ಯ ಬಯಲಾಗಿದೆ ಎಂದು ಹೇಳಿದ್ದಾರೆ.
ವಿಚಾರಣೆ ವೇಳೆ ಆರೋಪಿ ಈ ಪ್ರಕರಣವಲ್ಲದೆ ಇತರ 10 ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಫತೇಘರ್ ಸಾಹಿಬ್ ಮತ್ತು ಹೋಶಿಯಾರ್ ಪುರ ಜಿಲ್ಲೆಗಳಲ್ಲಿ ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ ಕೆಲವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ಇನ್ನು ಕೆಲವರ ಕೊಲೆಗೆ ಇಟ್ಟಿಗೆಯಂತಹ ವಸ್ತುಗಳನ್ನು ಬಳಸುತ್ತಿದ್ದ ಎಂದು ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.