ಭಾರತದಲ್ಲಿ ಏಳು ಮಂದಿ ಪತ್ರಕರ್ತರು ಜೈಲಿನಲ್ಲಿ, ಈ ಪೈಕಿ 5 ಮಂದಿ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ : ವರದಿ
ಸಾಂದರ್ಭಿಕ ಚಿತ್ರ | Photo: NDTV
ಹೊಸ ದಿಲ್ಲಿ: ಪತ್ರಕರ್ತರ ರಕ್ಷಣಾ ಸಮಿತಿ(ಸಿಪಿಜೆ)ಯ ಬಂದೀಖಾನೆ ಗಣತಿ ವರದಿಯ ಪ್ರಕಾರ, ವಿಶ್ವದಾದ್ಯಂತ 320 ಮಂದಿ ಪತ್ರಕರ್ತರು ಸೆರೆವಾಸದಲ್ಲಿದ್ದು, ಈ ಪೈಕಿ ಐದು ಮಂದಿ ಭಾರತಕ್ಕೆ ಸೇರಿದವರಾಗಿದ್ದಾರೆ ಎಂದು newlaundry.com ವರದಿ ಮಾಡಿದೆ.
ಕಳೆದ ವರ್ಷ ಡಿಸೆಂಬರ್ 1ರವರೆಗೆ ಜೈಲಿನಲ್ಲಿರುವ ಪತ್ರಕರ್ತರ ಒಟ್ಟು ಸಂಖ್ಯೆಯನ್ನು ಕ್ರೋಡೀಕರಿಸಿರುವ ಈ ವರದಿಯು, 1992ರಿಂದ ಈ ಗಣತಿಯು ಪ್ರಾರಂಭವಾದಾಗಿನಿಂದ ಜೈಲಿನಲ್ಲಿರುವ ಪತ್ರಕರ್ತರ ಸಂಖ್ಯೆ ಎರಡನೆ ಅತಿ ದೊಡ್ಡ ಮಟ್ಟದ್ದಾಗಿದೆ ಎಂದು ಹೇಳಿದೆ. ಆ ಮೂಲಕ ಸ್ವತಂತ್ರ ದನಿಗಳ ವಿರುದ್ಧ ಬೇರೂರಿರುವ ನಿರಂಕುಶಾಧಿಕಾರ ಹಾಗೂ ದಮನಕಾರಿ ಸರ್ಕಾರಗಳತ್ತ ಬೊಟ್ಟು ಮಾಡಿದೆ.
ಭಾರತದಲ್ಲಿ ಸೆರೆವಾಸ ಅನುಭವಿಸುತ್ತಿರುವ ಪತ್ರಕರ್ತರ ಸಂಖ್ಯೆಯು ಸತತ ಮೂರನೆಯ ವರ್ಷವು ದಾಖಲೆಯ ಗರಿಷ್ಠ ಮಟ್ಟದ್ದಾಗಿದೆ. ಕಳೆದ ವರ್ಷ ಮೂವರು ಪತ್ರಕರ್ತರನ್ನು ಬಿಡುಗಡೆ ಮಾಡಲಾಯಿತಾದರೂ, ಅದರ ಬೆನ್ನಿಗೇ ಮತ್ತೆ ಮೂವರು ಪತ್ರಕರ್ತರನ್ನು ಬಂಧೀಖಾನೆಗೆ ಕಳಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜೈಲುವಾಸ ಅನುಭವಿಸುತ್ತಿರುವ ಒಟ್ಟು ಏಳು ಪತ್ರಕರ್ತರ ಪೈಕಿ ನಾಲ್ಕು ಮಂದಿ ಪತ್ರಕರ್ತರು ಜಮ್ಮು ಮತ್ತು ಕಾಶ್ಮೀರದ ಮೂಲದವರಾಗಿದ್ದರೆ, ಒಟ್ಟು ಬಂಧನಕ್ಕೊಳಗಾಗಿರುವ ಏಳು ಮಂದಿ ಪತ್ರಕರ್ತರ ಪೈಕಿ ಯುಎಪಿಎ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಪತ್ರಕರ್ತರ ಸಂಖ್ಯೆ ಐದಾಗಿದೆ.
ಮಾಧ್ಯಮಗಳನ್ನು ಮೌನವಾಗಿಸಲು ಭಯೋತ್ಪಾದನಾ ನಿಗ್ರಹ ಕಾಯ್ದೆಗಳಾದ ಯುಎಪಿಎ ಹಾಗೂ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ಬಳಸುತ್ತಿರುವ ಭಾರತದ ವಿರುದ್ಧ ಟೀಕೆಗಳು ಮುಂದುವರಿದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜೈಲುಪಾಲಾಗಿರುವ ಪತ್ರಕರ್ತರ ಪೈಕಿ ಆಗಸ್ಟ್ 2018ರಿಂದ ಜೈಲಿನಲ್ಲಿರುವ ಕಾಶ್ಮೀರ್ ನೆರೇಟರ್ ಸುದ್ದಿ ಸಂಸ್ಥೆಯ ಆಸಿಫ್ ಸುಲ್ತಾನ್, ಜನವರಿ 2022ರಿಂದ ಜೈಲಿನಲ್ಲಿರುವ ಕಾಶ್ಮೀರ್ ವಾಲಾ ಸುದ್ದಿ ಸಂಸ್ಥೆಯ ಸಾಜದ್ ಗುಲ್, ಜುಲೈ 2022ರಿಂದ ಜೈಲಿನಲ್ಲಿರುವ ಸ್ವತಂತ್ರ ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್, ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಜೈಲಿನಲ್ಲಿರುವ ಸ್ವತಂತ್ರ ಪತ್ರಕರ್ತ ಗೌತಮ್ ನವಲ್ಕಾ, ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಜೈಲಿನಲ್ಲಿರುವ ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆಯ ಪ್ರಬೀರ್ ಪುರ್ಕಾಯಸ್ಥ ಹಾಗೂ ಕ್ರಮವಾಗಿ ಕಳೆದ ವರ್ಷದ ಸೆಪ್ಟೆಂಬರ್ ಮತ್ತು ಮಾರ್ಚ್ ತಿಂಗಳಿನಿಂದ ಜೈಲಿನಲ್ಲಿರುವ ಸ್ವತಂತ್ರ ಪತ್ರಕರ್ತರಾದ ಮಜೀದ್ ಹೈದರಿ ಹಾಗೂ ಇರ್ಫಾನ್ ಮೆಹ್ರಾಜ್ ಸೇರಿದ್ದಾರೆ.
ಪತ್ರಕರ್ತರನ್ನು ಜೈಲಿನಲ್ಲಿಟ್ಟಿರುವ ದೇಶಗಳ ಪೈಕಿ ಇರಾನ್ ನೊಂದಿಗೆ ಭಾರತವು ಆರನೇ ಶ್ರೇಯಾಂಕ ಹಂಚಿಕೊಂಡಿದ್ದು, ಅಕ್ಟೋಬರ್ 7ರಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ಪತ್ರಕರ್ತರನ್ನು ಜೈಲಿನಲ್ಲಿಟ್ಟಿರುವ ದೇಶವಾಗಿ ಇಸ್ರೇಲ್ ಹೊರಹೊಮ್ಮಿದೆ. ಪತ್ರಕರ್ತರನ್ನು ಜೈಲಿನಲ್ಲಿಟ್ಟಿರುವ ಐದು ಅಗ್ರ ಕ್ರಮಾಂಕದ ದೇಶಗಳ ಪೈಕಿ ಚೀನಾ, ಮಯನ್ಮಾರ್, ಬೆಲಾರಸ್, ರಶ್ಯಾ ಹಾಗೂ ವಿಯೆಟ್ನಾಂ ಸೇರಿವೆ.
ಈ ನಡುವೆ, ಪತ್ರಕರ್ತರ ಬಂಧನ ಮತ್ತು ವಶ ಸೇರಿದಂತೆ ಭಾರತದಲ್ಲಿ ನಡೆಯುತ್ತಿರುವ ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆ ಕುರಿತು Newslaundry ಸುದ್ದಿ ಸಂಸ್ಥೆ ನಿರಂತರವಾಗಿ ವರದಿ ಮಾಡಿತ್ತು.