7ನೇ ದಿಲ್ಲಿ ವಿಧಾನಸಭೆ ಐದು ವರ್ಷಗಳಲ್ಲಿ ಸೇರಿದ್ದು ಕೇವಲ 74 ದಿನಗಳು; ಇದು ಇತಿಹಾಸದಲ್ಲಿ ಕನಿಷ್ಠ

Photo credit: PTI
ಹೊಸದಿಲ್ಲಿ: ಏಳನೇ ದಿಲ್ಲಿ ವಿಧಾನಸಭೆಯು 2020ರಿಂದ 2025ರವರೆಗೆ ತನ್ನ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಸೇರಿದ್ದು ಕೇವಲ 74 ದಿನಗಳಿಗೆ, ಇದು ಹಿಂದಿನ ಎಲ್ಲ ಪೂರ್ಣಾವಧಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ ಎಂದು ಸ್ವತಂತ್ರ ಲಾಭೋದ್ದೇಶವಿಲ್ಲದ ಸಂಶೋಧನಾ ಗುಂಪು ಪಿಆರ್ಎಸ್ ಲೆಜಿಸ್ಲೇಟಿವ್ ರೀಸರ್ಚ್ ತನ್ನ ವರದಿಯಲ್ಲಿ ತಿಳಿಸಿದೆ.
ಪ್ರತಿ ವರ್ಷ ಅಧಿವೇಶನಗಳನ್ನು ಅಂತ್ಯಗೊಳಿಸದೆ ಮುಂದೂಡಲಾಗಿತ್ತು ಮತ್ತು ಹಲವಾರು ಭಾಗಗಳಲ್ಲಿ ವಿಂಗಡಿಸಲಾಗಿತ್ತು,ಹೀಗಾಗಿ ಅನೇಕ ಸಂದರ್ಭಗಳಲ್ಲಿ ಸದನವು ಕೇವಲ ಒಂದೆರಡು ದಿನಗಳಿಗೆ ಸಮಾವೇಶಗೊಂಡಿತ್ತು ಎಂದು ಹೇಳಿರುವ ವರದಿಯು,ಲೆಫ್ಟಿನಂಟ್ ಗವರ್ನರ್ ಅಧಿವೇಶನಗಳನ್ನು ಕರೆಯುತ್ತಾರೆ ಮತ್ತು ಅಂತ್ಯಗೊಳಿಸುತ್ತಾರಾದರೆ ಅಧಿವೇಶನದ ಸಮಯದಲ್ಲಿ ಸ್ಪೀಕರ್ ಬೈಠಕ್ಗಳನ್ನು ನಿಗದಿಗೊಳಿಸುತ್ತಾರೆ ಎಂದು ಬೆಟ್ಟು ಮಾಡಿದೆ.
ದಿಲ್ಲಿ ವಿಧಾನಸಭೆಯ ಮೊದಲ ಅಧಿವೇಶನವು 2020, ಫೆ.20ರಂದು ಆರಂಭಗೊಂಡಿತ್ತು ಮತ್ತು ಐದು ಭಾಗಗಳಾಗಿ ವಿಂಗಡಿಸಲ್ಪಟ್ಟ ನಂತರ 2021,ಮಾ.3ಕ್ಕೆ ಅಂತ್ಯಗೊಂಡಿತ್ತು. ಎರಡು,ಮೂರು ಮತ್ತು ನಾಲ್ಕನೇ ಅಧಿವೇಶನಗಳು ತಲಾ ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದವು.
ಐದನೇ ಅಧಿವೇಶನ 2024,ಫೆ.7ರಂದು ಆರಂಭಗೊಂಡಿದ್ದು,ಇನ್ನೂ ಅಂತ್ಯಗೊಂಡಿಲ್ಲ. ಬೈಠಕ್ ನಡೆದ 74 ದಿನಗಳಲ್ಲಿ ಕೇವಲ ಒಂಭತ್ತು ಸಲ ಪ್ರಶ್ನೆವೇಳೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
2019ರಿಂದ 2024ರವರೆಗೆ ಲೋಕಸಭೆಯಲ್ಲಿ ಸಂಸದರು ಪ್ರತಿ ವರ್ಷ 8,200 ಪ್ರಶ್ನೆಗಳನ್ನು ಕೇಳಿದ್ದರೆ,2020ರಿಂದ 2025ರವರೆಗೆ ದಿಲ್ಲಿ ಶಾಸಕರು ವರ್ಷಕ್ಕೆ ಸರಾಸರಿ ಕೇವಲ 219 ಪ್ರಶ್ನೆಗಳನ್ನು ಕೇಳಿದ್ದರು ಎಂದು ವರದಿಯು ತಿಳಿಸಿದೆ.
70 ಸದಸ್ಯ ಬಲದ ದಿಲ್ಲಿ ವಿಧಾನಸಭೆಗೆ ಫೆ.5ರಂದು ಚುನಾವಣೆ ನಡೆಯಲಿದ್ದು,ಫೆ.8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.