ಮೋದಿ ಹಲವು ಹೇಳಿಕೆಗಳು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿವೆ: ಸೀತಾರಾಮ ಯೆಚೂರಿ
(Photo@ PTI)
ಕೋಝಿಕ್ಕೋಡ್: ದೇಶದ ವಿವಿಧ ಭಾಗಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಗುರುವಾರ ಆರೋಪಿಸಿದ್ದಾರೆ.
ರಾಮನ ವಿಷಯದಲ್ಲಿ ಕೋಮು ಧ್ರುವೀಕರಣವನ್ನು ತೀವ್ರಗೊಳಿಸುವ ಉದ್ದೇಶದಿಂದ ಮೋದಿ ಅವರು ನೀಡಿದ ಹೇಳಿಕೆಗಳನ್ನು ಪಟ್ಟಿ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಯೆಚೂರಿ ಹೇಳಿದ್ದಾರೆ.
ಕೋಝಿಕ್ಕೋಡ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೀತಾರಾಮ ಯೆಚೂರಿ, ಎಡ ರಂಗ ಮೋದಿ ಹಾಗೂ ಬಿಜೆಪಿಯನ್ನು ವಿರೋಧಿಸುತ್ತಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಯುಡಿಎಫ್ ಅನ್ನು ಕೂಡ ತರಾಟೆಗೆ ತೆಗೆದುಕೊಂಡರು.
ಎಲ್ಡಿಎಫ್ ಮುಖ್ಯವಾಗಿ ಸಿಪಿಐ (ಎಂ) ಮೋದಿ ಅವರ ವಾಗ್ದಾಳಿ ನಡೆಸುವ ವಿಚಾರದಲ್ಲಿ ಮೌನವಾಗಿದೆ ಎಂಬ ಕಾಂಗ್ರೆಸ್ ಹಾಗೂ ಯುಡಿಎಫ್ನ ಆರೋಪ ವಿಚಿತ್ರವಾಗಿದೆ ಎಂದು ಅವರು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಬಂಧಿತರಾದ ಮೊದಲ ರಾಜಕೀಯ ನಾಯಕರಲ್ಲಿ ತಾನು ಕೂಡ ಒಬ್ಬ. ಸಂವಿಧಾನ ವಿಧಿ 370 ಅನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ರಾಜಕಾರಣಿಗಳನ್ನು ಬಂಧನದಲ್ಲಿ ಇರಿಸಿದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಎಡರಂಗ ಕೂಡ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿತ್ತು. ಅಲ್ಲದೆ, ಚುನಾವಣಾ ಬಾಂಡ್ಗಳನ್ನು ಸುಪ್ರೀಂ ಕೋರ್ಟ್ನಲ್ಲಿ ವಿರೋಧಿಸಿರುವುದು ಕೂಡ ಸಿಪಿಐ(ಎಂ) ಎಂದು ಯೆಚೂರಿ ಹೇಳಿದ್ದಾರೆ.
ಸಿಪಿಐ(ಎಂ)ನ ವಡಗರ ಲೋಕಸಭಾ ಅಭ್ಯರ್ಥಿ ಕೆ.ಕೆ. ಶೈಲಜಾ ವಿರುದ್ಧದ ಸಾಮಾಜಿಕ ಮಾಧ್ಯಮದ ಅಭಿಯಾನದ ಹಿನ್ನೆಲೆಯಲ್ಲಿ ಯೆಚೂರಿ ಅವರು ಈ ಹೇಳಿಕೆ ನೀಡಿದ್ದಾರೆ.